ಸಾರಾಂಶ
ಹಾಲು ದರ ಹೆಚ್ಚಳ ಹಾಗೂ ೮ ತಿಂಗಳಿಂದ ಪ್ರೋತ್ಸಾಹ ಹಣ ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಹಾಲು ದರ ಹೆಚ್ಚಳ ಹಾಗೂ ೮ ತಿಂಗಳಿಂದ ಪ್ರೋತ್ಸಾಹ ಹಣ ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ದುಂಡಪ್ಪ ಅಂಗಡಿ ಮಾತನಾಡಿ, ಹಾಲು ದರ ಹೆಚ್ಚಳ ಹಾಗೂ ೮ ತಿಂಗಳಿಂದ ಪ್ರೋತ್ಸಾಹ ಹಣ ಬಿಡುಗಡೆ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕ ಪ್ರಮಾಣದ ಹಣವನ್ನು ಸ್ವೀಕರಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನ ಕುಂಠಿತವಾಗುತ್ತಿದೆ. ದಿಢೀರ್ ಡೀಸೆಲ್ ಬೆಲೆ ಏರಿಕೆಯಿಂದ ಯಂತ್ರೋಪಕರಣಗಳ ಮೂಲಕ ನಡೆಸುವ ಕೃಷಿ ಕೆಲಸಗಳಿಗೆ ರೈತರು ದುಬಾರಿ ಬಾಡಿಗೆ ಹಣ ನೀಡುತ್ತಿದ್ದಾರೆ. ಇದರಿಂದಾಗಿ ಅವರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಮಾತನಾಡಿ, ರೈತ ಮಕ್ಕಳ ವಿದ್ಯಾನಿಧಿ ಯೋಜನೆ ಸ್ಥಗಿತಗೊಳಿಸಿದರಿಂದ ಮಕ್ಕಳ ಕಲಿಕೆಗೂ ತೊಂದರೆಯಾಗುತ್ತಿದೆ. ಒಂದೆಡೆ ಮುಂಗಾರು ಕೈ ಹಿಡಿಯುತ್ತಿದ್ದರೆ ಸರಕಾರ ಬೀಜ ಮತ್ತು ರಸ ಗೊಬ್ಬರ ದರ ಏರಿಸುವ ಮೂಲಕ ರೈತರಿಗೆ ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಕಳೆದ ಒಂದು ದಶಕದಿಂದ ಕನಿಷ್ಠ ₹೨೦೦ಗಳಿಗೆ ೧ ಕೆ.ಜಿ ಬಿತ್ತನೆ ಬೀಜ ಲಭ್ಯವಾಗುತ್ತಿತ್ತು. ಸರಕಾರ ಇದಕ್ಕೆ ₹೨೫ ಗಳನ್ನು ಮಾತ್ರ ಸಹಾಯಧನ ನೀಡುತ್ತಿತ್ತು. ಇಂದು ಅದೇ ಬಿತ್ತನೆ ಬೀಜ ₹೮೦೦ಗಳಿಗೂ ಅಧಿಕ ದರದಲ್ಲಿ ಸಿಗುತ್ತಿದೆ. ಆದರೆ ಸಕಾರದ ಸಹಾಯ ಧನ ಮಾತ್ರ ಹೆಚ್ಚಳವಾಗಿಲ್ಲ. ಇದರಿಂದ ರೈತರಿಗೆ ಇನ್ನಷ್ಷು ಆರ್ಥಿಕ ಹೊರೆಯಾಗುತ್ತಿದೆ. ರೈತರಿಗೆ ಸಹಾಯಧನವನ್ನು ಶೇ.೭೫ ಅಥವಾ ಶೇ.೫೦ ರಂತೆ ನೀಡಿ ಅವರನ್ನು ಕೃಷಿ ಕ್ಷೇತ್ರಕ್ಕೆ ಉತ್ತೇಜಿತ ಗೊಳಿಸಬೇಕಾಗಿದೆ. ಅಂದಾಗ ಮಾತ್ರ ಈ ಯೋಜನೆಗೆ ಒಂದು ಅರ್ಥ ಸಿಗಲಿದೆ. ಇಲ್ಲವಾದರೆ ಹೆಸರಿಗೆ ಮಾತ್ರ ಈ ಯೋಜನೆ ಆಗಲಿದೆ ಎಂದು ದೂರಿದರು.ಈ ವೇಳೆ ಮುಖಂಡರಾದ ಚಂದ್ರಶೇಖರ ಕವಟಗಿ, ಈರಣ್ಣಾ ರಾವೂರ, ಮಾಳುಗೌಡ ಪಾಟೀಲ, ಬಾಲರಾಜ ರೇಡ್ಡಿ, ರಾಜಶೇಖರ ಡೊಳ್ಳಿ, ಸುರೇಶ ಬಿರಾದಾರ, ರೇಣುಕಾ ಪರಸಪ್ಪಗೌಳ, ರಾಚಪ್ಪಾ ಬಿರಾದಾರ, ಡಿ.ಜಿ. ಬಿರಾದಾರ, ಅಶ್ವಿನಿ ಪಟ್ಟಣಶೇಟ್ಟಿ, ಕುಮಾರ ನಿಡೋನಿ, ಸ್ವಪ್ನಾ ಕಣಮುಚನಾಳ, ಪಾಂಡುಸಾಹುಕಾರ ದೊಡಮನಿ ಮುಂತಾದವರು ಇದ್ದರು.