ಸಾರಾಂಶ
ಚನ್ನಗಿರಿ ಪೊಲೀಸ್ ಇಲಾಖೆಯಿಂದ ಕುಂದುಕೊರತೆ ಸಭೆಯಲ್ಲಿ ಡಿವೈಎಸ್ಪಿ ರುದ್ರಪ್ಪ
----ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ ಕಳ್ಳತನ, ನಕಲಿ ಬಂಗಾರ ಮಾರಾಟ ಹಾಗೂ ಇತರೆ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಆಗ ಮಾತ್ರ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಪೊಲೀಸ್ ಉಪಾಧೀಕ್ಷಕ ರುದ್ರಪ್ಪ ಉಜ್ಜಿನಕೊಪ್ಪ ಹೇಳಿದರು.
ಬುಧವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆ ಉದ್ದೇಶಿಸಿ ಅವರು ಮಾತನಾಡಿದರು.ಅಪರಾಧಗಳು ಯಾವ ಕ್ಷಣದಲ್ಲಿ ಅಥವಾ ಯಾವ ಸಂದರ್ಭದಲ್ಲಿ ನಡೆಯುತ್ತವೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಕೆಲವು ಅಪರಾಧಗಳನ್ನು ತಡೆಯುವುದು ಸಾರ್ವಜನಿಕರ ಕೈಯಲ್ಲೇ ಇರುತ್ತದೆ. ಆದ್ದರಿಂದ ಪೊಲೀಸರನ್ನು ಸಾರ್ವಜನಿಕರು ಸ್ನೇಹಿತರಂತೆ ಕಾಣುತ್ತಾ ಸರಿಯಾದ ಮಾಹಿತಿಯನ್ನು ನೀಡಬೇಕು. ಆಗ ಅಪರಾಧಗಳನ್ನು ಸುಲಭವಾಗಿ ತಡೆಯಬಹುದು ಎಂದರು.
ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಪಟ್ಟಣದ ಮುಖ್ಯ ರಸ್ತೆ ಹಾಗೂ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸರಗಳ್ಳತನ, ಮನೆಗಳ್ಳತನ, ದ್ವಿಚಕ್ರ ವಾಹನಗಳ ಕಳ್ಳತನ ಸೇರಿದಂತೆ ವಿವಿಧ ರೀತಿಯ ಕಳವು ಪ್ರಕರಣ ನಡೆಯುತ್ತಿವೆ. ಆದ್ದರಿಂದ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಬಹುದು ಎಂದು ತಿಳಿಸಿದರು.ನಿರ್ಜನ ಪ್ರದೇಶಗಳಿಗೆ ವಾಯು ವಿಹಾರಕ್ಕೆಂದು ಹೋಗುವವರು ಚಿನ್ನಾಭರಣ ಧರಿಸಿ ಹೋಗಬೇಡಿ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಅಧಿಕವಾಗಿವೆ. ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಏನಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ನಿವೃತ್ತ ಪಿಡಿಒ ಸಿ.ಎಂ. ಗುರುಸಿದ್ದಯ್ಯ ಮಾತನಾಡಿ, ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ, ತಾಲೂಕು ಕ್ರೀಡಾಂಗಣ ಮತ್ತು ಸರ್ಕಾರಿ ಶಾಲೆಗಳ ಆವರಣದಲ್ಲಿ ರಾತ್ರಿ ವೇಳೆ ಕಾನೂನುಬಾಹಿರ ಚಟುವಟಿಗಳು ನಡೆಯುತ್ತಿವೆ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಸಿಪಿಐ ಸಂತೋಷ್ ಕುಮಾರ್, ಪುರಸಭೆಯ ಸದಸ್ಯ ಶ್ರೀಕಾಂತ್, ತಿಪ್ಪೇಸ್ವಾಮಿ, ಶಿಕ್ಷಕ ಖದೀರ್, ಗಣೇಶ್ ರಾಯ್ಕರ್, ಸಾರ್ವಜನಿಕರು ಹಾಜರಿದ್ದರು.
-----3ಕೆಸಿಎನ್ಜಿ2:ಚನ್ನಗಿರಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಮಾತನಾಡಿದರು.