ಸಾರಾಂಶ
ಶ್ರೀಗುರು ನಮನ ಸಂತೃಪ್ತಿ ಸಿನಿಮಾ ತಂಡದೊಂದಿಗೆ ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಮತ್ತು ಯುವವಾಹಿನಿ ಹಳೆಯಂಗಡಿ ಘಟಕದ ಜಂಟಿ ಸಂಯೋಜನೆಯಲ್ಲಿ ಚಿತ್ರವನ್ನು ಉಚಿತವಾಗಿ ಪ್ರದರ್ಶನ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಗ್ರಾಮೀಣ ಭಾಗದ ಪ್ರತಿಭಾವಂತ ಕಲಾವಿದರು, ಕಲಾ ತಂತ್ರಜ್ಞರನ್ನು ಪ್ರೋತ್ಸಾಹಿಸಿದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. ಇಂದು ಸಿನಿಮಾ ಕ್ಷೇತ್ರ ವಿಸ್ತಾರವಾಗಿದ್ದು ಯುವ ಜನತೆ ತಮ್ಮ ಕೌಶಲ್ಯವನ್ನು ಪ್ರದರ್ಶನ ಮಾಡುವ ಮೂಲಕ ಜನ ಮೆಚ್ಚುಗೆಗಳಿಸುತ್ತಿದ್ದಾರೆ ಎಂದು ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಹೇಳಿದ್ದಾರೆ.ಹಳೆಯಂಗಡಿ ಬಿಲ್ಲವ ಭವನದಲ್ಲಿ ನಡೆದ ಪೀಡಿತ್ ಹಿಂದಿ ಸಿನಿಮಾದ ಉಚಿತ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅಧ್ಯಕ್ಷತೆ ವಹಿಸಿ, ಸಿನಿಮಾ ಕ್ಷೇತ್ರವು ಮನರಂಜನೆಯೊಂದಿಗೆ ಜಾಗೃತಿ ಮೂಡಿಸುವ ಕ್ಷೇತ್ರವಾಗಿದೆ. ಕಲಾವಿದರನ್ನು ಪೋಷಿಸುವುದರೊಂದಿಗೆ ಅವರಿಗೆ ಆಸರೆಯಾಗುವ ಕೆಲಸ ನಿರಂತರವಾಗಿ ನಡೆಯಲಿದೆಯೆಂದು ಹೇಳಿದರು.ಶ್ರೀಗುರು ನಮನ ಸಂತೃಪ್ತಿ ಸಿನಿಮಾ ತಂಡದೊಂದಿಗೆ ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಮತ್ತು ಯುವವಾಹಿನಿ ಹಳೆಯಂಗಡಿ ಘಟಕದ ಜಂಟಿ ಸಂಯೋಜನೆಯಲ್ಲಿ ಚಿತ್ರವನ್ನು ಉಚಿತವಾಗಿ ಪ್ರದರ್ಶನ ನಡೆಯಿತು.
ಅದೃಷ್ಟ ಪ್ರೇಕ್ಷಕ ಉಡುಗೊರೆಯನ್ನು ಯೋಗೀಶ್ ಪಾವಂಜೆ ಅವರಿಗೆ ವಸಂತ ಬೆರ್ನಾಡ್ ನೀಡಿ ಗೌರವಿಸಿದರು.ಹಳೆಯಂಗಡಿಯ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಮೋಹನ್ ಸುವರ್ಣ, ಯುವವಾಹಿನಿ ಘಟಕದ ಅಧ್ಯಕ್ಷೆ ಹಿತಾಕ್ಷಿ ನಾರಾಯಣ್, ಹಿರಿಯ ರಂಗಭೂಮಿ ಕಲಾವಿದ ಭಾಸ್ಕರ ಸಾಲ್ಯಾನ್, ಉಪನ್ಯಾಸಕ ರವಿರಾಜ್ ಮಂಗಳೂರು, ಸಿನಿಮಾದ ಸಹ ನಿರ್ಮಾಪಕ ಸುರೇಶ್ ವರ್ಕಾಡಿ, ನಿರ್ದೇಶಕ ದೇವಿಪ್ರಕಾಶ್, ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು, ಕಲಾವಿದರಾದ ಧರ್ಮಾನಂದ ಶೆಟ್ಟಿಗಾರ್ ತೋಕೂರು, ನಾಗರಾಜ್ ಪೂಜಾರಿ ಬಪ್ಪನಾಡು, ಸುರೇಶ್ ಶೆಟ್ಟಿಗಾರ್ ಕೆರೆಕಾಡು ಮತ್ತಿತರರು ಇದ್ದರು. ಕಲಾವಿದ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.