ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಚರಂಡಿಗಳಿಗೆ ಬ್ಲೀಚಿಂಗ್ ಪೆನಾಯಿಲ್ ಹಾಕುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.ತಾಪಂ ಕಚೇರಿ ಆವರಣದಲ್ಲಿ ಬುಧವಾರ ಮನವಿ ಸಲ್ಲಿಸಿದ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ರಸ್ತೆ ಚರಂಡಿಗಳು ಸ್ವಚ್ಛತೆ ಇಲ್ಲದೆ ಆನೈರ್ಮಲ್ಯಕ್ಕೆ ಕಾರಣವಾಗುತ್ತಿವೆ. ವರ್ಷ ಕಳೆದರೂ ಬ್ಲೀಚಿಂಗ್ ಫಿನಾಯಿಲ್ ಹಾಕದ ಪರಿಣಾಮ ಚರಂಡಿಗಳು ಗಬ್ಬು ವಾಸನೆ ಬೀರುತ್ತಿವೆ. ಬಳಸಿದ ನೀರು ಮನೆಗಳ ಮುಂದೆ ಹರಿಯುತ್ತಿದ್ದು ಕೊಚ್ಚೆ ಗುಂಡಿಗಳಂತಾಗಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಚರಂಡಿ ಸ್ವಚ್ಛತೆಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಕೆಲ ಹಳ್ಳಿಗಳಲ್ಲಿ ನೀರಿನ ವಾಲುಗಳಲ್ಲಿ ನೀರು ನಿಂತು ಅದೇ ನೀರು ಪೈಪ್ ಲೈನ್ ಮೂಲಕ ಸರಬರಾಜು ಆಗುತ್ತಿದ್ದು, ನೀರು ಕುಡಿದ ಜನರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನೀರಿನ ತೊಟ್ಟಿಗಳು ವರ್ಷ ಕಳೆದರೂ ತೊಳೆದಿಲ್ಲ ಮೇಲಾಧಿಕಾರಿಗಳು ಈ ಕುರಿತು ಗಮನ ಹರಿಸಿ ನೀರಿನ ವಾಲ್ ಗಳನ್ನು ದುರಸ್ತಿಗೊಳಿಸಿ ನೀರು ನಿಲ್ಲದಂತೆ ಎಚ್ಚರವಹಿಸಲು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಬೇಕು.ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ಹಳ್ಳಿಗಳಲ್ಲಿ ರಸ್ತೆ ಚರಂಡಿ ಮತ್ತು ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛ ಗೊಳಿಸಿ ಬ್ಲೀಚಿಂಗ್ ಫಿನಾಯಿಲ್ ಹಾಕಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಗ್ರಾಮಗಳಲ್ಲಿ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಗಲಲ್ಲಿ ಬೀದಿ ದೀಪಗಳು ಉರಿಯುತ್ತಿವೆ. ಇದರಿಂದ ಕೆಪಿಟಿಸಿಎಲ್ ಗೆ ಅಪಾರ ನಷ್ಟವಾಗುತ್ತಿದೆ. ಈಗಿದ್ದರೂ ಸಂಬಂದಿಸಿದ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ. ಕೂಡಲೇ ಹಳ್ಳಿಗಳಲ್ಲಿ ಬೀದಿ ದೀಪಗಳಿಗೆ ಕಂಟ್ರೋಲರ್ ಹಾಕಿ ವಿದ್ಯುತ್ ಉಳಿತಾಯ ಮಾಡಬೇಕು.ಉದ್ಯೋಗ ಖಾತ್ರಿ ಯೋಜನೆ ಕೇವಲ ನೆಪ ಮಾತ್ರ ಎಂಬಂತಾಗಿದೆ. ಜನರಿಗೆ ಸಕಾಲಕ್ಕೆ ಕೆಲಸ ಸಿಗದೆ ಪರಿತಪಿಸುತ್ತಿದ್ದರೂ ದಾಖಲೆಗಳಲ್ಲಿ ಮಾತ್ರ ಮಾತ್ರ ಖರ್ಚಾಗುತ್ತಿದೆ. ನರೇಗಾ ಯೋಜನೆಯಲ್ಲಿ ಜನರಿಗೆ ಕೆಲಸ ನೀಡಬೇಕು. ಹಾನಗಲ್ ಪ್ರವಾಸಿ ಮಂದಿರದ ಆವರಣದಲ್ಲಿ ಇರಿಸಿದ ವಿಕಲ ಚೇತನರ ದ್ವಿಚಕ್ರ ವಾಹನಗಳನ್ನು ಕೂಡಲೇ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ರೈತ ಸಂಘದ ಉಪಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ, ತಾಲೂಕ ಅಧ್ಯಕ್ಷ ಮಂಜುನಾಥ್ ಕೆ ಚಂದ್ರಣ್ಣ, ಎಸ್‌ಟಿ ಚಂದ್ರಣ್ಣ, ಡಿ.ಬಿ ಕೃಷ್ಣಮೂರ್ತಿ, ಗುರುಸ್ವಾಮಿ, ನಾಗೇಶ, ಈರಣ್ಣ, ಮರಿಲಿಂಗಪ್ಪ, ನಾಗರಾಜ, ಗೌತಮ ಇದ್ದರು.