ಸಾರಾಂಶ
ಜಮ್ಮು-ಕಾಶ್ಮೀರದಲ್ಲಿ ವೀರ ಮರಣ ಹೊಂದಿದ ತಿಕೋಟಾದ ಯೋಧ ರಾಜು ಕರ್ಜಗಿ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ನಡೆಯಿತು.
ಕನ್ನಡಪ್ರಭ ವಾರ್ತೆ ತಿಕೋಟಾ
ಜಮ್ಮು-ಕಾಶ್ಮೀರದಲ್ಲಿ ವೀರ ಮರಣ ಹೊಂದಿದ ತಿಕೋಟಾದ ಯೋಧ ರಾಜು ಕರ್ಜಗಿ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ನಡೆಯಿತು.ವೀರ ಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ತವರಿಗೆ ತರಲಾಯಿತು. ಪಾರ್ಥಿವ ಶರೀರ ಆಗಮಿಸುತ್ತಲೇ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ತಿಕೋಟಾ ಪಟ್ಟಣದ ವಾಡೇ ಮೈದಾನದಲ್ಲಿ ಇರಿಸಲಾಗಿತ್ತು.ಸಾರ್ವಜನಿಕರು ಸರದಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದುಕೊಂಡರು. ತಿಕೋಟಾ ಸುತ್ತಲಿನ ಸಾವಿರಾರು ಜನ ಹಾಗೂ ರಾಜಕೀಯ ನಾಯಕರು, ಗಣ್ಯರು ಸೇರಿದಂತೆ ಹಲವರು ಯೋಧನ ಪಾರ್ಥಿವ ಶರೀರದ ಮೇಲೆ ಹೂಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು. ನಂತರ ಮೆರವಣಿಗೆ ಮೂಲಕ ಯೋಧನ ಅಂತ್ಯಸಂಸ್ಕಾರ ಮಾಡಲಾಯಿತು.ಮನೆಗೆ ಆಸರಾಗಿದ್ದ ಮಗ ರಾಷ್ಟ್ರಧ್ವಜ ಹೊದ್ದು ಮಲಗಿದ್ದನ್ನು ಕಂಡ ತಾಯಿ ಅಕ್ಕೂಬಾಯಿ, ಒಡಹುಟ್ಟಿದವರ ರೋಧನ ಮುಗಿಲು ಮುಟ್ಟಿತ್ತು. ಪತಿ ತನ್ನನ್ನು ಅಗಲಿದ ಸುದ್ದಿ ತಿಳಿದ ದಿನದಿಂದಲೇ ಪತ್ನಿ ಸುಧಾರಾಣಿ ಕಣ್ಣೀರಾಗಿದ್ದಾಳೆ.
ಮೃತ ಯೋಧ ಹವಾಲ್ದಾರ್ ರಾಜು ಕರ್ಜಗಿ ಭಾರತೀಯ ರೈಫಲ್ಸ್‌ನ 51 ಯುನಿಟ್‌ನ ಮಹಾರ್ ರೆಜಿಮೆಂಟ್ -13 ರ ಹವಾಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇವರ ಸಾವಿಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.