ಹಾನಗಲ್ಲದಲ್ಲಿ ಮಿತಿಮೀರಿದ ಕಳ್ಳತನ ಪ್ರಕರಣ, ವ್ಯಾಪಾರಸ್ಥರಿಗೆ ಕಿರುಕುಳ ತಪ್ಪಿಸಿ

| Published : Jul 04 2024, 01:01 AM IST

ಹಾನಗಲ್ಲದಲ್ಲಿ ಮಿತಿಮೀರಿದ ಕಳ್ಳತನ ಪ್ರಕರಣ, ವ್ಯಾಪಾರಸ್ಥರಿಗೆ ಕಿರುಕುಳ ತಪ್ಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ಪಟ್ಟಣದಲ್ಲಿ ಕಳ್ಳತನ ಪ್ರಕರಣ ಹೆಚ್ಚಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಕಳ್ಳತನ, ವ್ಯಾಪಾರಿಗಳಿಗೆ ಕಿರುಕುಳ ಪ್ರಕರಣ ಕಡಿಮೆಯಾಗದಿದ್ದರೆ ಹಾನಗಲ್ಲ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಹಾಗನಲ್ಲ ನಗರ ವರ್ತಕರ ಸಂಘ ತಾಲೂಕು ಆಡಳಿತವನ್ನು ಎಚ್ಚರಿಸಿದ್ದಾರೆ.

ಹಾನಗಲ್ಲ: ಪಟ್ಟಣದಲ್ಲಿ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕದಿದ್ದರೆ ಹಾನಗಲ್ಲ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಹಾಗನಲ್ಲ ನಗರ ವರ್ತಕರ ಸಂಘ ತಾಲೂಕು ಆಡಳಿತವನ್ನು ಎಚ್ಚರಿಸಿದ್ದಾರೆ. ಹಾನಗಲ್ಲಿನ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಪಟ್ಟಣದ ವಿವಿಧ ವ್ಯಾಪಾರಸ್ಥರ ಸಮ್ಮುಖದಲ್ಲಿ ತಹಸೀಲ್ದಾರ್ ಎಸ್. ರೇಣುಕಮ್ಮ ಅವರೊಂದಿಗೆ ಚರ್ಚಿಸಿದ ವ್ಯಾಪಾರಸ್ಥರು, ತಮ್ಮ ಅಹವಾಲುಗಳ ಮನವಿ ಸಲ್ಲಿಸಿದರು.

ನಗರದಲ್ಲಿ ಕಳ್ಳತನದ ಪ್ರಕರಣಗಳು ಮಿತಿ ಮೀರುತ್ತಿವೆ, ಆಯಕಟ್ಟಿನ ಸ್ಥಳಗಳಲ್ಲಿ ವ್ಯಾಪಾರಸ್ಥರಿಗೆ ಕಿರುಕುಳ ಹೆಚ್ಚಿದೆ, ವಾಹನ ದಟ್ಟಣೆ ನಿರ್ವಹಣೆಯಾಗುತ್ತಿಲ್ಲ, ಫುಟ್‌ಪಾತ್ ವ್ಯಾಪಾರಿಗಳಿಂದ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಅನಿವಾರ್ಯ ಎಂದ ಹೇಳಿದ್ದಾರೆ.

ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಕಳ್ಳತನದ ಪ್ರಕರಣಗಳ ಬಗ್ಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ವ್ಯಾಪಾರಸ್ಥರಿಗೆ ಭಯ ಹುಟ್ಟಿಸಿದೆ. ಪಟ್ಟಣದ ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಭರವಸೆ ವರ್ಷಗಳಿಂದ ಕೇವಲ ಭರವಸೆಯಾಗಿಯೇ ಉಳಿದಿದೆ. ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌ನಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ₹೧೦ ಹಾಗೂ ₹೨೦ರ ನಾಣ್ಯಗಳನ್ನು ಗ್ರಾಹಕರು ತಿರಸ್ಕರಿಸುತ್ತಿದ್ದಾರೆ. ಪಾದಚಾರಿಗಳಿಗೆ ಓಡಾಟಕ್ಕೆ ಲಭ್ಯವಿಲ್ಲದಷ್ಟು ಫುಟ್‌ಪಾತ್ ವ್ಯಾಪಾರ ನಡೆಯುತ್ತಿದೆ. ಮಹಾತ್ಮ ಗಾಂಧಿ ವೃತ್ತದಲ್ಲಿ ಟೆಂಪೋಗಳ ಹಾವಳಿಯಿಂದ ಓಡಾಟ ದುಸ್ತರವಾಗಿದೆ. ಪುರಸಭೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಹಾನಗಲ್ಲನಲ್ಲಿ ವ್ಯಾಪಾರಸ್ಥರು, ಸಾರ್ವಜನಿಕರು ತೀರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.

ಚಿನ್ನದ ಅಂಗಡಿಗಳು, ಮನೆ, ಇತರ ಅಂಗಡಿಗಳ ಕಳ್ಳತನ ಹೆಚ್ಚಾಗಿದ್ದು, ಇದನ್ನು ತಡೆಯಲು ವಿಶೇಷ ಪೊಲೀಸ್ ಬಂದೋಬಸ್ತ್ ನಡೆಸುವುದು ಹಾಗೂ ಈಗಾಗಲೇ ಕಳ್ಳತನವಾದವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಎಸ್. ರೇಣುಕಮ್ಮ ಮಾತನಾಡಿ, ಎಲ್ಲದಕ್ಕೂ ಕೂಡಲೆ ಕ್ರಮ ಖಚಿತ. ನಗರದ ಬಂದೋಬಸ್ತ್‌ಗೆ ಕಾಳಜಿ ವಹಿಸಲಾಗುತ್ತದೆ. ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ಗುರುತಿಸಿ ತಿಳಿಸಿದರೆ ತಕ್ಷಣ ಕ್ರಮಕ್ಕೆ ಮುಂದಾಗುತ್ತೇವೆ. ೮-೧೦ ದಿನಗಳಲ್ಲಿ ಎಲ್ಲವನ್ನು ಸರಿಪಡಿಸುವ ವ್ಯವಸ್ಥೆ ಮಾಡುತ್ತೇವೆ. ಯಾವುದೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅವಕಾಶ ನೀಡುವುದಿಲ್ಲ. ಪುರಸಭೆ ಹಾಗೂ ಪೊಲೀಸ್ ಇಲಾಖೆ ತನ್ನ ಕಾರ್ಯವನ್ನು ಚುರುಕುಗೊಳಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸಿಪಿಐ ಆರ್. ವೀರೇಶ ಮಾತನಾಡಿ, ಜಂಟಿ ಕಾರ್ಯಾಚರಣೆ ಮೂಲಕ ವರ್ತಕರು ಸಲ್ಲಿಸಿದ ದೂರುಗಳ ಬಗೆಗೆ ಗಂಭೀರ ಕ್ರಮಕ್ಕೆ ಮುಂದಾಗುತ್ತೇವೆ. ಸಾರ್ವಜನಿಕರೂ ಸಹಕರಿಸಬೇಕು. ಫುಟ್‌ಪಾತ್ ತೆರವು ಸೇರಿದಂತೆ ಸಾರ್ವಜನಿಕವಾಗಿ ತೊಂದರೆಯಾಗುವ ಯಾವುದೆ ಸಮಸ್ಯೆಗೆ ಕೂಡಲೇ ಪರಿಹಾರ ನೀಡುತ್ತೇವೆ. ಈಗಾಗಲೇ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಜರುಗಿಸಲಾಗಿದೆ. ಅನುದಾನಕ್ಕಾಗಿ ಸರ್ಕಾರಕ್ಕೆ ಬರೆದಿದ್ದು, ಶೀಘ್ರ ಅನುದಾನ ಬಿಡುಗಡೆಯಾಗುವ ಭರವಸೆ ಇದೆ ಎಂದರು.

ನಗರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗುರುರಾಜ ನಿಂಗೋಜಿ, ಕಾರ್ಯದರ್ಶಿ ರವಿಚಂದ್ರ ಪುರೋಹಿತ, ಎಂ.ಬಿ. ಕಲಾಲ, ಮಂಜುನಾಥ ಶೇಠ್, ಮನೋಜ ಸರಾಫ್, ಆದರ್ಶ ಶೆಟ್ಟಿ, ಕೃಷ್ಣ ಬಾಗಲೆ, ರಾಜಣ್ಣ ಸಿಂಧೂರ, ಕಾಂತರಾಜ್ ಭಜಂತ್ರಿ, ಜಾಫರ್‌ಸಾಬ ಓಣಿಕೇರಿ, ಮುನ್ನಾ ಬೇಗ್, ರಾಮು ಪಾರಕ್ಕನವರ, ಮಂಜು ಏಸಕ್ಕನವರ, ತೀರ್ಥರಾಜ, ಮಹೇಶ ಕಬ್ಬೂರ, ಹನುಮಂತ ಹುಡೇದವರ, ರವಿ ಪೂಜಾರ ಹಾಗೂ ಪಟ್ಟಣದ ವ್ಯಾಪಾರಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.