ಸಾರಾಂಶ
ಹಾನಗಲ್ಲ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವಲ್ಲಿ ಸಹಕಾರಿ ಸಂಸ್ಥೆ ಯಶಸ್ವಿಯಾದರೆ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.
ಬುಧವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ಸಮುದಾಯ ಭವನದಲ್ಲಿ ಧಮನಿ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಕೊಡು-ಕೊಳ್ಳುವಿಕೆಯಲ್ಲಿ ಪ್ರಾಮಾಣಿಕತೆ ಇರಬೇಕು. ಸಮಾಜಕ್ಕೆ ಸದಾ ನನ್ನಿಂದ ಒಳಿತಾಗಲಿ ಎಂಬ ಭಾವವಿರಬೇಕು. ಕೇವಲ ಇತರರಿಂದ ಪಡೆಯುವುದು ಮಾತ್ರವಲ್ಲ. ಸಮಾಜಕ್ಕೆ ಕೊಡುಗೆಯನ್ನೂ ನೀಡಬೇಕು. ಹಲವು ಸಹಕಾರಿ ಸಂಘ-ಸಂಸ್ಥೆಗಳು ಹುಟ್ಟಿ ಮಾಯವಾಗಿವೆ. ಇನ್ನೂ ಕೆಲವು ಸಂಸ್ಥೆಗಳು ಎತ್ತರಕ್ಕೆ ಬೆಳೆದು ಸಮಾಜಕ್ಕೆ ಉಪಕಾರಿಯಾಗಿವೆ. ಸಹಕಾರ ಎಂಬುದಕ್ಕೆ ಹೆಚ್ಚು ಮಹತ್ವವಿದೆ. ಮಾನವೀಯತೆಯನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ದೊಡ್ಡದು. ದುರ್ಬಲರನ್ನು ಕೈ ಹಿಡಿದೆತ್ತಿ ಶಕ್ತಿ ತುಂಬಿದರೆ ಅಸಮಾನತೆ ಇಲ್ಲದ ಸಾಮಾಜಿಕ ವ್ಯವಸ್ಥೆ ನೋಡಲು ಸಾಧ್ಯ ಎಂದರು.ಹಿರಿಯ ಸಹಕಾರಿ ಧುರೀಣ ಎಂ.ಬಿ. ಕಲಾಲ ಮಾತನಾಡಿ, ಸಂಘ-ಸಂಸ್ಥೆಗಳ ಹುಟ್ಟು ಹಣ ಗಳಿಸಲು ಎಂಬ ಭಾವನೆ ಜನರಲ್ಲಿದೆ. ಆದರೆ ಉಳ್ಳವರ ಹಣ ಇಡಿಗಂಟಾಗಿ ಪಡೆದು, ಇಲ್ಲದವರಿಗೆ ತಾತ್ಕಾಲಿಕ ಅನುಕೂಲಕ್ಕೆ ನೀಡುವ ಸಾಲ ವ್ಯವಸ್ಥೆ ಬಗ್ಗೆ ಎಚ್ಚರಿಕೆ ಇರಬೇಕು. ಹಣದ ದುರ್ಬಳಕೆಗೆ ಅವಕಾಶವಾದಾಗ ಆರ್ಥಿಕ ಸಂಸ್ಥೆಗಳು ದಿವಾಳಿಯಾಗುತ್ತವೆ. ಹಾನಗಲ್ಲ ಒಂದರಲ್ಲೇ ೩೦ಕ್ಕೂ ಅಧಿಕ ಸಹಕಾರಿ ಸಂಘಗಳಿವೆ. ಆದರೆ ಕ್ರಿಯಾಶೀಲವಾಗಿರುವ ಸಂಘಗಳು ಐದಾರು ಮಾತ್ರ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕುಮಾರಣ್ಣ ಹತ್ತಿಕಾಳ, ಬದುಕಿನಲ್ಲಿ ದುಡಿದು ಶ್ರಮವಹಿಸಿದ್ದಕ್ಕೆ ನನಗೆ ಒಳ್ಳೆಯ ಪ್ರತಿಫಲ ಸಿಕ್ಕಿದೆ. ಈಗ ಸಮಾಜಕ್ಕಾಗಿ ಒಂದಷ್ಟು ಸೇವೆ ಮಾಡುವ ಉದ್ದೇಶ ನಮ್ಮದಾಗಿದೆ. ಹಿರಿಯರ ಸಹಾಯ, ಮಾರ್ಗದರ್ಶನದಲ್ಲಿ ಈ ಸಂಸ್ಥೆಯನ್ನು ಚೆನ್ನಾಗಿ ಬೆಳೆಸುವ ಉದ್ದೇಶವಿದ್ದು, ಎಲ್ಲರ ಸಹಕಾರವಿರಲಿ ಎಂದರು.
ಹಿರಿಯ ಸಹಕಾರಿ ಧುರೀಣ ಸದಾಶಿವಪ್ಪ ಉದಾಸಿ, ಕುಮಾರೇಶ್ವರ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಎ.ಎಸ್. ಬಳ್ಳಾರಿ, ಶಿವಪುತ್ರಪ್ಪ ಕರ್ಜಗಿ, ಚಂದ್ರಕಾಂತ ಪಾಟೀಲ ಅತಿಥಿಗಳಾಗಿದ್ದರು. ಶಿವಕುಮಾರ ದೇಶಮುಖ ಪ್ರಾಸ್ತಾವಿಕವಾಗಿ ಮಾತನಾಡಿದರು.