ನೀಟ್, ಎನ್‌ಟಿಎ ರದ್ದು ಮಾಡಲು ಸಿಪಿಎಂ ಆಗ್ರಹ

| Published : Jul 04 2024, 01:01 AM IST

ಸಾರಾಂಶ

ದೊಡ್ಡಬಳ್ಳಾಪುರ: ನೀಟ್ ಪ್ರವೇಶ ಪರೀಕ್ಷೆ ಕೂಡಲೇ ರದ್ದಾಗಬೇಕು. ಆಯಾ ರಾಜ್ಯಗಳೇ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತಾಗಬೇಕು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರದ್ದು ಮಾಡಬೇಕು ಎಂದು ಆಗ್ರಹಿಸಿ ಸಿಪಿಐಎಂ ವತಿಯಿಂದ ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ದೊಡ್ಡಬಳ್ಳಾಪುರ: ನೀಟ್ ಪ್ರವೇಶ ಪರೀಕ್ಷೆ ಕೂಡಲೇ ರದ್ದಾಗಬೇಕು. ಆಯಾ ರಾಜ್ಯಗಳೇ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತಾಗಬೇಕು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರದ್ದು ಮಾಡಬೇಕು ಎಂದು ಆಗ್ರಹಿಸಿ ಸಿಪಿಐಎಂ ವತಿಯಿಂದ ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಿಪಿಐಎಂ ತಾಲೂಕು ಕಾರ್ಯದರ್ಶಿ ಎಸ್.ರುದ್ರಾರಾಧ್ಯ, ಶಿಕ್ಷಣ ಮಾಫಿಯಾಗಳು ನಡೆಸುತ್ತಿರುವ ಎಲ್ಲಾ ಬಗೆಯ ಅಕ್ರಮಗಳ ಕುರಿತು ತನಿಖೆಯಾಗಬೇಕು. ಪ್ರವೇಶ ಪರೀಕ್ಷೆಗಳಲ್ಲಿ ಅನಗತ್ಯವಾಗಿ ತೊಂದರೆ ಅನುಭವಿಸಿದ ಎಲ್ಲಾ ವಿಧ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಶಿಕ್ಷಣದ ವ್ಯಾಪಾರೀಕರಣ ನಿಲ್ಲಬೇಕಾಗಿದೆ. ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ದೇಶಾದ್ಯಾಂತ ಕೆಲ ಕೋಚಿಂಗ್ ಸೆಂಟರ್‌ಗಳು ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ನಡೆಸಿರುವ ಅವ್ಯವಹಾರ, ಅಕ್ರಮಗಳಿಂದ ಪದೇ ಪದೇ ಪ್ರವೇಶ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಸೋರಿಕೆಯಾಗುತ್ತಿವೆ. ವರ್ಷಾನುಗಟ್ಟಲೇ ಶ್ರಮವಹಿಸಿ ಓದಿ ಉತ್ತಮ ಶಿಕ್ಷಣ ಪಡೆಯುವ ಉದ್ದೇಶವನ್ನಿಟ್ಟುಕೊಂಡಿದ್ದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಬಡ, ಮಧ್ಯಮ ವರ್ಗದ ಮಕ್ಕಳ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ಹುಸಿಯಾಗಿದೆ. ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡಿ ವಿದ್ಯಾರ್ಥಿಗಳನ್ನು, ಪೋಷಕರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ದೇಶ ಒಂದು ಪರೀಕ್ಷೆ ಎಂಬ ಕೇಂದ್ರ ಸರ್ಕಾರದ ತಪ್ಪು ಮಾದರಿಯಿಂದ ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಒಂದು ದೇಶ ಸರ್ವನಾಶವಾಗಲು ಇಷ್ಟು ಸಾಕು. ಯಾವುದೇ ಯೋಗ್ಯತೆ, ಅರ್ಹತೆ ಇಲ್ಲದ ಕೋಟ್ಯಧಿಪತಿಗಳು ಅಂಗಡಿಗಳ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಶಿಕ್ಷಣದ ಖಾಸಗೀಕರಣ ವ್ಯಾಪಕವಾಗಿ ನಡೆಯುತ್ತಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ ಹೆದ್ದಾರಿಯಲ್ಲಿ ಹತ್ತಾರು ಖಾಸಗಿ ವಿಶ್ವವಿದ್ಯಾಲಯಗಳು ಬಂದಿವೆ. ಇಲ್ಲಿ ಶ್ರೀಮಂತ ಮಕ್ಕಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಕೋಟಿಗಟ್ಟಲೆ ಹಣ ತೆರಬೇಕಾಗುತ್ತದೆ. ಎಲ್ಲರಿಗೂ ಉಚಿತ ಮತ್ತು ಸಾರ್ವತ್ರಿಕ ಶಿಕ್ಷಣ ನೀಡುವ ತನ್ನ ಜವಾಬ್ದಾರಿಯಿಂದ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪತ್ರಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ಮುಖಂಡ ಪಿ.ಎ.ವೆಂಕಟೇಶ್, ತಾಲೂಕು ಸಮಿತಿ ಸದಸ್ಯರಾದ ರೇಣುಕಾರಾಧ್ಯ, ಕೆ.ರಘುಕುಮಾರ್, ಎಂ.ಚೌಡಯ್ಯ, ಮಹಿಳಾ ಮುಖಂಡರಾದ ಸವಿತಾ, ಕಾರ್ಮಿಕ ಮುಖಂಡರಾದ ಅನಿಲ್ ಗುಪ್ತ, ಎಂ.ಮಂಜುನಾಥ್, ಸಾಧಿಕ್ ಪಾಷಾ, ಏಜಾಜ್ ಪಾಷಾ, ವಿದ್ಯಾರ್ಥಿ ಮುಖಂಡರಾದ ನಟರಾಜ್, ಗೌಡಪ್ಪ ಮುಂತಾದವರು ಇದ್ದರು.

3ಕೆಡಿಬಿಪಿ1-

ನೀಟ್‌ ಹಾಗೂ ಎನ್‌ಟಿಎ ರದ್ದತಿಗೆ ಆಗ್ರಹಿಸಿ ದೊಡ್ಡಬಳ್ಳಾಪುರದಲ್ಲಿ ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.