ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವ ಹಠಕ್ಕೆ ಬಿದ್ದಿರುವ ಜಿಲ್ಲಾಡಳಿತ, ಪರೀಕ್ಷಾರ್ಥ ಸ್ಫೋಟದ ದಿನವನ್ನು ಬಹಿರಂಗಪಡಿಸುವುದಕ್ಕೆ ಹಿಂದೇಟು ಹಾಕುತ್ತಿದೆ. ಜಿಲ್ಲಾಡಳಿತದ ನಡೆಯನ್ನು ಖಂಡಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ಜು.5 ರಂದು ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.ಪರೀಕ್ಷಾರ್ಥ ಸ್ಫೋಟ ನಡೆಸಲು ಕೆಆರ್‌ಎಸ್ ಬಳಿ ಪೂರ್ವಸಿದ್ಧತೆ ನಡೆಸುತ್ತಿರುವ ಕುರಿತಂತೆ ಕೆಆರ್‌ಎಸ್ ಪ್ರತಿಭಟನೆ ಮುಗಿಸಿ ನಗರಕ್ಕೆ ಆಗಮಿಸದ ಹೋರಾಟಗಾರರು ಜಿಲ್ಲಾಧಿಕಾರಿ ಕುಮಾರ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿದರು. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನಿಯೋಗವು ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ನಡೆಸಬಾರದು. ಈಗ ನಡೆಸುತ್ತಿರುವ ಪೂರ್ವಸಿದ್ಧತೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು.
ರೈತರ ಮನವಿ ಆಲಿಸಿದ ಡಾ.ಕುಮಾರ ಅವರು, ಟ್ರಯಲ್ ಬ್ಲಾಸ್ಟ್ ನಡೆಸುವ ಉದ್ದೇಶ ನಮಗಾಗಲೀ ಅಥವಾ ಸರ್ಕಾರಕ್ಕಾಗಲೀ ಇಲ್ಲ. ಇದು ನ್ಯಾಯಾಲಯದ ಆದೇಶ. ಹಾಗಾಗಿ ಪಾಲಿಸಲೇಬೇಕಿದೆ. ಮುಖ್ಯವಾಗಿ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಹಾಗೂ ಟ್ರಯಲ್ ಬ್ಲಾಸ್ಟ್ ನಡೆಸುವುದರ ಪರಿಣಾಮವನ್ನು ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡ ತಿಳಿಸಬೇಕು. ನಂತರ ಸರ್ಕಾರವು ಅದನ್ನು 15 ಕಿ.ಮೀ ಎಂದು ತಜ್ಞರು ಹೇಳಿದ್ದರೆ, ಸರ್ಕಾರ 20 ಅಥವಾ 15 ಕಿ.ಮೀ.ಗೆ ಮೀಸಲಿಡಬಹುದು ಅಥವಾ ಇದನ್ನೂ ಪ್ರಶ್ನೆ ಮಾಡುವ ಹಕ್ಕು ನ್ಯಾಯಾಲಯಕ್ಕಿದೆ. ಅಲ್ಲದೇ, ಅಣೆಕಟ್ಟೆ ಸುರಕ್ಷತಾ ಸಮಿತಿ ಇದನ್ನು ಅಂತಿಮವಾಗಿ ನಿರ್ಧಾರ ಮಾಡಬಹುದು ಎಂದರು.ಸದ್ಯಕ್ಕೆ ಟ್ರಯಲ್ ಬ್ಲಾಸ್ಟ್‌ಗೆ ಅಗತ್ಯ ಸಿದ್ಧತೆ ಮಾಡಿಕೊಂಡು ನಂತರ ವಿಜ್ಞಾನಿಗಳಿಗೆ ಹಾಗೂ ತಜ್ಞರ ತಂಡಕ್ಕೆ ಮಾಹಿತಿ ನೀಡಲಾಗುವುದು. ಸಿದ್ಧತೆಯೆಲ್ಲಾ ಮುಗಿದ ಮೇಲೆ ಅವರು ಟ್ರಯಲ್ ಬ್ಲಾಸ್ಟ್ ಯಾವಾಗ ಮಾಡುತ್ತಾರೆ ಎಂಬುದನ್ನು ನಮಗೆ ತಿಳಿಸುತ್ತಾರೆ. ಅಲ್ಲಿಯವರೆಗೆ ನಮಗೆ ಗೊತ್ತಾಗುವುದಿಲ್ಲ. ಆದರೆ, ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿದೆ ಅಷ್ಟೇ ಎಂದು ವಿವರಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತರು ಮತ್ತು ಜನರ ಅಭಿಪ್ರಾಯವು ಟ್ರಯಲ್ ಬ್ಲಾಸ್ಟ್ ವಿರುದ್ಧ ಇದೆ. ಅದನ್ನು ನೀವು ನ್ಯಾಯಾಲಯ ಮತ್ತು ಸರ್ಕಾರದ ಗಮನ ಸೆಳೆಯಬೇಕು. ತಕ್ಷಣವೇ ಸಂಬಂಧಪಟ್ಟವರಿಗೆ ಅರ್ಜಿ ಬರೆದು ನಮ್ಮ ಸಮಸ್ಯೆ ತಳಿಸಬೇಕು. ಏನಾದರೂ ಟ್ರಯಲ್ ಬ್ಲಾಸ್ಟ್ ನಡೆಸಲೇ ಬೇಕು ಎಂದರೆ ನಾವು ಜೈಲಿಗೆ ಹೋಗುವುದಕ್ಕೂ ರೆಡಿ ಇದ್ದೇವೆ ಎಂದು ಸ್ಪಷ್ಟಪಡಿಸಿದರು.ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆ ಉಳಿಯಬೇಕು ಎಂಬುದು ನಮ್ಮ ಹಾಗೂ ರೈತರ ಉದ್ದೇಶ, ನೀವು ಯಾವ ದಿನ ಟ್ರಯಲ್ ಬ್ಲಾಸ್ಟ್ ಮಾಡುತ್ತೇವೆ ಎಂಬುದನ್ನು ತಿಳಿಸಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ದಾರಿ ನೋಡಿಕೊಳ್ಳುತ್ತೇವೆ. ಹಾಗಾಗಿ ನೀವು ಯಾವ ದಿನ ಟ್ರಯಲ್ ಬ್ಲಾಸ್ಟ್ ಮಾಡುತ್ತೀರಿ ಎಂಬುದನ್ನು ಮುಂಚಿತವಾಗಿ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದರು.
ಮುಖಂಡರಾದ ಪ್ರಸನ್ನ ಎನ್.ಗೌಡ, ಸುನೀತಾ ಪುಟ್ಟಣ್ಣಯ್ಯ, ಲಿಂಗಪ್ಪಾಜಿ, ಶಿವಪ್ಪ, ನಾಗರಾಜು, ಶಿವಳ್ಳಿ ಚಂದ್ರು, ಪಾಂಡು ಭಾಗವಹಿಸಿದ್ದರು.