ನಾಗೇಂದ್ರ ರಾಜಿನಾಮೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ವಾಲ್ಮೀಕಿ ಸಮಾಜದ ಹಣ ದುರ್ಬಳಕೆ ಮಾಡಿಕೊಂಡಿರುವುದನ್ನು ನಮ್ಮ ಸಮಾಜ ಎಂದೆಂದಿಗೂ ಕ್ಷಮಿಸುವುದಿಲ್ಲ
ಕೊಪ್ಪಳ: ನಗರದ ಜಿಲ್ಲಾಡಳಿತ ಭವನದ ಎದುರು ಜಿಲ್ಲಾ ಬಿಜೆಪಿಯಿಂದ ಸಚಿವ ನಾಗೇಂದ್ರ ಪ್ರತಿಕೃತಿ ಇಟ್ಟು ಪ್ರತಿಭಟನೆ ಜರುಗಿತು. ನಂತರ ಬಿಜೆಪಿಯಿಂದ ಸಚಿವ ನಾಗೇಂದ್ರ ಪ್ರತಿಕೃತಿ ದಹಿಸುವುದಕ್ಕೆ ಪ್ರಯತ್ನಿಸಿ, ಹೋರಾಟ ನಡೆಸಲಾಯಿತು.
ಕಳೆದ ಮೂರು ದಿನಗಳಿಂದ ಬಿಜೆಪಿಯಿಂದ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಧರಣಿ ಜರುಗಿತು. ಶುಕ್ರವಾರದ ಧರಣಿಯಲ್ಲಿ ಮೊದಲು ನಾಗೇಂದ್ರ ಪ್ರತಿಕೃತಿ ಮುಂದೆ ಕುಳಿತ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ನಾಗೇಂದ್ರ ವಾಲ್ಮೀಕಿ ಹಗರಣದ ₹೧೫೦ಕೋಟಿ ವಾಪಸ್ ವಿಪ ಸದಸ್ಯೆ ಹೇಮಲತಾ ನಾಯಕ್ ಅವರಿಗೆ ಕೊಡು, ಸರ್ಕಾರಕ್ಕೆ ಕೊಡುತ್ತಾಳೆ ಎಂದು ಅಳುತ್ತಾ ವ್ಯಂಗ್ಯಭರಿತವಾಗಿ ಆಗ್ರಹ ಪಡಿಸಿದ್ದು, ಗಮನ ಸೆಳೆಯಿತು.ಕಾರ್ಯಕರ್ತ ಖಾಜಾಹುಸೇನ ವ್ಯಂಗ್ಯ ಭರಿತ ಮಾತುಗಳಿಗೆ ಉಳಿದ ಕಾರ್ಯಕರ್ತರು ಹಾಗೂ ಮುಖಂಡರು ಸಾಥ್ ನೀಡಿದರು. ಬಳಿಕ ನಾಗೇಂದ್ರ ಪ್ರತಿಕೃತಿಯೊಂದಿಗೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಕೆಲವರು ನಾಗೇಂದ್ರ ಪ್ರತಿಕೃತಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಪೊಲೀಸರು ತಡೆದು ನಾಗೇಂದ್ರ ಪ್ರತಿಕೃತಿಯೊಂದಿಗೆ ಕೆಲ ಪ್ರತಿಭಟನಾಕಾರರನ್ನು ಬಂಧಿಸಿ, ಕರೆದೊಯ್ದರು.
ಬಳಿಕ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರ ಮೂಲಕ ರಾಜ್ಯಪಾಲರಿಗೆ ಬಿಜೆಪಿಯಿಂದ ಮನವಿ ಸಲ್ಲಿಸಲಾಯಿತು.ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ನಾಗೇಂದ್ರ ರಾಜಿನಾಮೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ವಾಲ್ಮೀಕಿ ಸಮಾಜದ ಹಣ ದುರ್ಬಳಕೆ ಮಾಡಿಕೊಂಡಿರುವುದನ್ನು ನಮ್ಮ ಸಮಾಜ ಎಂದೆಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಬಸವರಾಜ ಕ್ಯಾವಟರ್ ಮಾತನಾಡಿ, ಈ ಹಿಂದೆ ಮುಡಾ ಕೇಸ್ ನಲ್ಲಿ ಅನ್ಯಾಯ ನಡೆದಾಗ ಇದೇ ರೀತಿ ಬಿಜೆಪಿ ಪ್ರತಿಭಟನೆ ನಡೆಸಿದ್ದರಿಂದ ಸಿದ್ದರಾಮಯ್ಯ ಕುಟುಂಬದಿಂದ ೩೩ ನಿವೇಶನ ವಾಪಸ್ ಕೊಡಲಾಗಿತ್ತು. ಅದೇ ರೀತಿ ಇದೀಗ ವಾಲ್ಮೀಕಿ ಸಮುದಾಯದ ಹಣ ದುರ್ಬಳಕೆ ಮಾಡಿಕೊಂಡಿರುವ ಬಿ. ನಾಗೇಂದ್ರ ರಾಜಿನಾಮೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ವಾಲ್ಮೀಕಿ ಹಗರಣದಲ್ಲಿ ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ನೇರ ಪಾತ್ರವಿದೆ. ನಾಗೇಂದ್ರ ಈ ಹಗರಣದಲ್ಲಿ ತಮ್ಮ ಹೆಸರು ಎಲ್ಲಿ ಹೇಳಿ ಬಿಡುತ್ತಾನೋ ಎಂಬ ಹೆದರಿಕೆಯಿಂದ ನಾಗೇಂದ್ರ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ನಮ್ಮ ಹೋರಾಟ ನಿರಂತರ ಎಂದು ಕಿಡಿಕಾರಿದರು.ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ವಾಲ್ಮೀಕಿ ಸಮುದಾಯದಲ್ಲಿ ಜನ್ಮತಾಳಿದ ನಾಗೇಂದ್ರ, ಅದೇ ಸಮುದಾಯಕ್ಕೆ ಅನ್ಯಾಯ ಮಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹೀಗಾಗಿ ಬಿಜೆಪಿ ಈ ವಿಚಾರ ಗಂಭೀರವಾಗಿ ತೆಗೆದುಕೊಂಡು ಉಗ್ರ ಹೋರಾಟ ಮಾಡುತ್ತಿದೆ. ರಾಜಿನಾಮೆ ಕೊಡುವವರೆಗೂ ಯಾವುದೇ ಕಾರಣಕ್ಕೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ಪ್ರಮುಖರಾದ ಮಹಾಂತೇಶ ಪಾಟೀಲ್, ಅಮರೇಶ, ವೀರೇಶ, ಮಹಾಲಕ್ಷ್ಮಿ ಕಂದಾರಿ ಸೇರಿ ಇತರರು ಇದ್ದರು.