ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Jul 13 2024, 01:40 AM IST

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿಯಿಂದ ಮುಡಾವನ್ನು ಮುತ್ತಿಗೆ ಮಾಡುವ ಹೋರಾಟ ಹಮ್ಮಿಕೊಂಡಿದ್ದಾಗ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಹಾಗೂ ಬಿಜೆಪಿ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಹಾಸನ ನಗರದಲ್ಲಿ ಶುಕ್ರವಾರ ಬಿಜೆಪಿ ಮುಖಂಡರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮುಡಾ ಹಗರಣವನ್ನು ಖಂಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಾಗ ಮಾರ್ಗಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಹಾಗೂ ಬಿಜೆಪಿ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಹಾಸನ ನಗರದಲ್ಲಿ ಶುಕ್ರವಾರ ಬಿಜೆಪಿ ಮುಖಂಡರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಈಗಾಗಲೇ ರಾಜ್ಯ ಸರ್ಕಾರವು ಹಲವಾರು ಹಗರಣಗಳಲ್ಲಿ ಶಾಮೀಲಾಗಿದೆ. ವಾಲ್ಮೀಕಿ ನಿಗಮದಲ್ಲಿ ಹಗರಣ, ಎಸ್.ಸಿ.ಎಸ್.ಟಿ. ನಿಗಮದಲ್ಲಿ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ಸರ್ಕಾರ ಭಾಗಿಯಾಗಿರುವ ಸರ್ಕಾರ ಪ್ರಸ್ತುತ ಸಾವಿರಾರು ಕೋಟಿಗಳ ಮುಡಾ ಹಗರಣ ಬಂದಿದೆ. ಇಂತಹ ಹಗರಣವನ್ನು ಪ್ರಶ್ನಿಸುವ ಹಕ್ಕು ವ್ಯಕ್ತಿಗೆ ಪ್ರಜಾಪ್ರಭುತ್ವದಲ್ಲಿದೆ.

ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿಯಿಂದ ಮುಡಾವನ್ನು ಮುತ್ತಿಗೆ ಮಾಡುವ ಹೋರಾಟ ಹಮ್ಮಿಕೊಂಡಿದ್ದಾಗ ಬಿಜೆಪಿ ನಾಯಕರನ್ನು ಬೆಂಗಳೂರಿನಲ್ಲೆ ಬಂಧನ ಮಾಡುವ ಮೂಲಕ ಮೈಸೂರಿಗೆ ಬಾರದ ಹಾಗೆ ತಡೆ ಮಾಡಿದೆ ಎಂದರು. ಇಂದು ಪ್ರಜಾಪ್ರಭುತ್ವವನ್ನೆ ಕಗ್ಗೊಲೆ ಮಾಡುವ ದಿನಗಳು ಬಂದಿದೆ. ಯಾವುದೇ ಹಗರಣ ನಡೆದಾಗ ಎತ್ತಿ ಹಿಡಿಯಬೇಕು. ವಿರೋಧ ಪಕ್ಷದವರಾದ ನಾವುಗಳು ಇಂತಹ ಹಗರಣವನ್ನು ಎತ್ತಿ ಹಿಡಿಯುವ ವೇಳೆ ತಡೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧ ಚಲೋ: ಮುಂದಿನ ಸೋಮವಾರದಂದು ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಆಗಮಿಸಿ ವಿಧಾನಸೌಧ ಚಲೋ ಮಾಡಿ ಮುತ್ತಿಗೆ ಹಾಕಲಾಗುವುದು. ಬಿಜೆಪಿ ನಾಯಕರಾದ ವಿಜಯೇಂದ್ರ ಅವರನ್ನು ಬಂಧನ ಮಾಡಿರುವುದನ್ನು ಖಂಡಿಸಿ ಇಡೀ ರಾಜ್ಯದಲ್ಲಿ ಪ್ರತಿಭಟನೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವ ತನಕ ಬಿಜೆಪಿಯಿಂದ ಹೋರಾಟ ಮಾಡಲಾಗುವುದು. ನಡೆದಿರುವ ಹಗರಣದ ಸರ್ಕಾರವನ್ನು ನಾವು ಬಿಡುವುದಿಲ್ಲ. ಪ್ರತಿನಿತ್ಯ ಹೋರಾಟ ಮಾಡಲಾಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಿಂಚಿತ್ತು ಕಳಕಳಿ ಇಲ್ಲದೇ ದರ್ಪ ಪ್ರದರ್ಶಿಸುತ್ತಿದ್ದಾರೆ. ಇಂತಹ ದರ್ಪದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಬಿಜೆಪಿ ಮುಖಂಡರಾದ ಜಿ. ದೇವರಾಜೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ದೇಶದ ಇತಿಹಾಸದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮೂಡೋ ಹಗರಣಕ್ಕೆ ಸಂಬಂಧಿಸಿದಂತೆ ನೂರಾರು ಕೋಟಿ ಆಸ್ತಿಯನ್ನು ತಮ್ಮ ಕುಟುಂಬಕ್ಕೆ ಮಾಡಿಕೊಂಡಿರುವುದನ್ನು ಬಿಜೆಪಿ ಪಕ್ಷದಿಂದ ಖಂಡಿಸುತ್ತೇವೆ. ಯಾವುದೇ ಜಮೀನನ್ನು ಭೂ ಸ್ವಾಧೀನ ಪಡೆಸಿಕೊಂಡರೇ ಅವರಿಗೆ ಪರಿಹಾರವನ್ನು ಕೊಡಬೇಕು. ಆದರೇ ಯಾರದೊ ಜಮೀನಿಗೆ ಕೋಟ್ಯಂತರ ನಿವೇಶನವನ್ನು ಪಡೆದು ರಾಜ್ಯದ ಜನತೆಗೆ ಸಿದ್ದರಾಮಯ್ಯ ಮೋಸವನ್ನು ಮಾಡಿದ್ದಾರೆ ಎಂದರು. ಇಲ್ಲಿ ಅವರ ಸೈಟ್ ಯಾವುದು ಇಲ್ಲ. ಸಿಎಂ ಹೆಂಡತಿಗೆ ಉಡುಗೊರೆಯಾಗಿ ನೀಡಿದ್ದರೇ ಅಫಿಡವಿಟ್‌ನಲ್ಲಿ ಉಲ್ಲೇಖ ಮಾಡಬೇಕಾಗಿತ್ತು. ಮುಡಾ ಸೈಟನ್ನು ಮೋಸ ಮಾಡಿ ಪಡೆಯಬೇಕೆಂದು ಈಗ ಇದು ನನ್ನ ಹೆಂಡತಿಗೆ ಕೊಟ್ಟಿರುವುದೆಂದು ಇಂತಹ ಒಬ್ಬ ಜನವಿರೋಧಿ ಮುಖ್ಯಮಂತ್ರಿ ನಮ್ಮ ರಾಜ್ಯಕ್ಕೆ ಬೇಕಾ ಎಂಬುದು ನಮ್ಮ ಪ್ರಶ್ನೆ ಎಂದು ಜರಿದರು.

ಮುಡಾ ಹಗರಣದ ಪ್ರಮುಖ ರುವಾರಿ ಸಿದ್ದರಾಮಯ್ಯ ಅವರನ್ನು ರಾಜ್ಯಪಾಲರು ವಜಾಗೊಳಿಸಿ ಸರ್ಕಾರವನ್ನ ವಜಾ ಮಾಡಬೇಕೆಂದು ಗೌರ್‍ನರ್ ಅವರಲ್ಲಿ ಕೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು. ಇದರ ವಿರುದ್ಧವಾಗಿ ಬಿಜೆಪಿಯ ನಮ್ಮ ನಾಯಕರಾದ ವಿಜಯೇಂದ್ರ ಅವರು ಪ್ರತಿಭಟನೆ ಮಾಡಲು ಹೋದಾಗ ಅವರ ಹಕ್ಕನ್ನು ಕೀಳಲು ಮಾರ್ಗಮಧ್ಯೆಯೇ ಬಂಧನ ಮಾಡಿರುವುದು ಖಂಡನೀಯ,ಇದನ್ನು ಬಿಜೆಪಿ ಪಕ್ಷ ವಿರೋಧಿಸುತ್ತದೆ. ಅತೀ ಶೀಘ್ರದಲ್ಲಿಯೇ ಈ ಸರ್ಕಾರ ಪತನವಾಗಲಿದ್ದು, ಕೂಡಲೇ ಮುಖ್ಯಂತ್ರಿಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಪ್ರೀತಿವರ್ಧನ್, ಹರ್ಷಿತ್, ರಾಜ್ಯ ರೈತ ಮೋರ್ಚಾದ ಕಾರ್‍ಯಕಾರಣಿ ಸದಸ್ಯರಾದ ಶಕುನಿಗೌಡ, ಆನಂದ್, ರೈತ ಮೋರ್ಚಾದ ಉಪಾಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ನಟರಾಜು, ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.