ಶಾಸಕರ ಮನೆ ಗೋಡೆಗೆ ಸಗಣಿ ಬಳಿದ ಬಿಜೆಪಿ ಪ್ರತಿಭಟನೆ

| Published : Jan 15 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದರೂ ವಿರೋಧಿಸದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಅವರ ಮನೆಯ ಎದುರು ಸಗಣಿ ಹಾಕಿ, ಗೋಡೆಗೆ ಸಗಣಿ ಬಳಿದು ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ಅಮಾನವಿಯವಾಗಿ ವರ್ತಿಸಿರುವ ಘಟನೆಯ ಹಿಂದೆ ಷಡ್ಯಂತ್ರ ನಡೆದಿದೆ. ಕೇವಲ ಬಾಹ್ಯ ಆರೋಪಿಯನ್ನು ಕಾಟಾಚಾರಕ್ಕೆ ಬಂದಿಸದೆ ದುಷ್ಕೃತ್ಯದ ಹಿಂದೆ ಇರುವ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಎಂದು ತಾಲೂಕು ರೈತ ಮೋರ್ಚಾ ಘಟಕದ ಸದಸ್ಯರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದರೂ ವಿರೋಧಿಸದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಅವರ ಮನೆಯ ಎದುರು ಸಗಣಿ ಹಾಕಿ, ಗೋಡೆಗೆ ಸಗಣಿ ಬಳಿದು ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ಅಮಾನವಿಯವಾಗಿ ವರ್ತಿಸಿರುವ ಘಟನೆಯ ಹಿಂದೆ ಷಡ್ಯಂತ್ರ ನಡೆದಿದೆ. ಕೇವಲ ಬಾಹ್ಯ ಆರೋಪಿಯನ್ನು ಕಾಟಾಚಾರಕ್ಕೆ ಬಂದಿಸದೆ ದುಷ್ಕೃತ್ಯದ ಹಿಂದೆ ಇರುವ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಎಂದು ತಾಲೂಕು ರೈತ ಮೋರ್ಚಾ ಘಟಕದ ಸದಸ್ಯರು ಆಗ್ರಹಿಸಿದರು.ಮುದ್ದೇಬಿಹಾಳದ ಹುಡ್ಕೋ ಶಾಸಕರ ನಿವಾಸದ ಕಡೆಗೆ ಧಾವಿಸುತ್ತಿದ್ದ ಪ್ರತಿಭಟನಾಕಾರರನ್ನು ತಡೆದ ಪೊಲೀಸ್ ಸಿಬ್ಬಂದಿ ಶಾಸಕರ ಕುಟುಂಬದೊಂದಿಗೆ ಇರುವ ನಿವಾಸಕ್ಕೆ ಬಂದು ಮನವಿ ಕೊಡಲು ಅವಕಾಶವಿಲ್ಲ ಎಂದು ಹೇಳಿದರು. ಮಾತ್ರವಲ್ಲ ಮುಂದೆ ಹೋಗಲು ಅವಕಾಶ ಕೊಡಲಿಲ್ಲ. ಇದಕ್ಕೆ ಉತ್ತರಿಸಿದ ಪ್ರತಿಭಟನಾಕಾರರು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪವಿತ್ರ ಗೋವುಗಳನ್ನು ಹಿಂಸೆ ಮಾಡುವುದನ್ನು ಖಂಡಿಸಿ ತಾವು ತಹಸೀಲ್ದಾರ್ ಅವರಿಗೆ ಮನವಿ ಕೊಡಲು ಬಂದಿದ್ದೇವೆ. ಆದರೆ ಇಂದು ಸಾರ್ವತ್ರಿಕ ರಜೆ ಇದ್ದುದ್ದರಿಂದ ಶಾಸಕರಿಗೆ ಮನವಿ ಕೊಡಲು ತೆರಳುತ್ತಿದ್ದೇವೆ. ರೈತರ ಜೀವನಾಡಿ ಹಸು ಕೊಲ್ಲುವುದು, ಹಿಂಸೆ ಮಾಡುವುದು ಅಮಾನವೀಯ. ಇದು ನಾಡಿನ ಸಂಸ್ಕೃತಿ ಹಾಗೂ ರೈತರ ಮೇಲಿನ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯನ್ನು ಖಂಡಿಸುತ್ತಿಲ್ಲ ಎಂದು ಹೇಳಿ ಶಾಸಕರ ಮನೆ ಎದುರು ಸಗಣಿ ಹಾಕಿ, ಗೋಡೆಗೆ ಸಗಣಿ ಬಳಿದಿದ್ದಾರೆ. ಆದರೆ, ಸಗಣಿ ಹಾಕದಂತೆ ಪೊಲೀಸರು ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಕೂಡ ನಡೆಯಿತು.

ಬಂಧನ, ಧರಣಿ: ನಂತರ ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆರು ಜನರ ವಿರುದ್ಧ ನಾಗರಾಜ ತಂಗಡಗಿ ಅವರು ಸಲ್ಲಿಸಿದ ದೂರಿನ ಅನ್ವಯ ಬಂಧಿಸಿದರು. ದೂರು ದಾಖಲಿಸಲು ಮುಂದಾದಾಗ ಮಾಜಿ ಶಾಸಕ ಎ.ಎಸ್.ಪಾಟೀಲ್ ಅವರು ಗೋ ಹಿಂಸೆಯನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಕೇಳುವ ಹಕ್ಕು ಎಲ್ಲರಿಗೂ ಇದೆ. ಪ್ರತಿಭಟನಾಕಾರರು ಮನವಿ ಸಲ್ಲಿಸಲು ಹೋಗಿದ್ದರು. ಮನೆಯ ಮುಂದೆ ಪವಿತ್ರ ಗೋವಿನ ಸಗಣಿಯನ್ನು ಸಾರಿಸಿ ಶಾಂತಿಯುತ ಪ್ರತಿಭಟನೆ ಮಾಡಿದ್ದರು. ಆದ್ದರಿಂದ ಅವರನ್ನು ಬಿಡುಗಡೆ ಮಾಡಬೇಕು ಎಂದು ಪೊಲೀಸ್ ಠಾಣೆಯಲ್ಲಿ ಧರಣಿ ಮಾಡಿದರು. ಪ್ರತಿಭಟನೆಯ ಸಂದರ್ಭದಲ್ಲಿ ಮಹಾಂತಗೌಡ ಪಾಟೀಲ್ ಮುನ್ನಾದನಿ ನಾಡಗೌಡ, ಕೆಂಚಪ್ಪ ಬಿರಾದಾರ, ಮಲಕೇಂದ್ರಗೌಡ ಪಾಟೀಲ್, ಸಂಗಮ್ಮ ದೇವರಹಳ್ಳಿ ಮುಂತಾದವರು ಇದ್ದರು. ನಂತರ ಪೊಲೀಸರು ಬಿಗಿ ಬಂದೋಬಸ್ತನಲ್ಲಿ ಹೋರಾಟಗಾರರಾದ ಗಿರೀಶಗೌಡ ಪಾಟೀಲ, ಜಗದೀಶ ಪಂಪಣ್ಣವರ ಏಕನಾಥ, ಅಶೋಕ ರಾಥೋಡ್, ಪ್ರೇಮಸಿಂಗ್ ಚೌವಾಣ, ನಾಗೇಶ ಕವಡಿಮಟ್ಟಿ, ಸಂಜು ಬಾಗೇವಾಡಿ ಇತರರ ಮೇಲೆ ದೂರು ದಾಖಲಿಸಿದರು.