Aland: BJP Mandal President Mallikarjun Kandagule announced that a massive protest has been organized by the Aland unit of the Bharatiya Janata Party (BJP) on August 10 in front of the Aland town bus stand. The protest aims to condemn the plight of thousands of farmers in the taluk who are facing hardship due to the failure to sanction adequate crop insurance.
ಆಳಂದ: ತಾಲೂಕಿಗೆ ಸಮರ್ಪಕ ಬೆಳೆ ವಿಮೆ ಮಂಜೂರಾಗದೆ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿರುವುದನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಆಳಂದ ಮಂಡಲ ವತಿಯಿಂದ ಆ.10ರಂದು ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನಲ್ಲಿ ಅನೇಕ ಅರ್ಹ ರೈತರು ಬೆಳೆ ವಿಮೆ ಸೌಲಭ್ಯದಿಂದ ವಂಚಿತರಾಗಿದ್ದು, ರೈತರ ಅಹವಾಲುಗಳಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಆಳಂದ ತಾಲೂಕಿನ ಎಲ್ಲಾ ಗ್ರಾಮಗಳ ಬೆಳೆ ವಿಮೆಯಿಂದ ವಂಚಿತರಾದ ರೈತರು, ರೈತ ಸಂಘಟನೆಗಳ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರೈತರ ಹಕ್ಕಿಗಾಗಿ ಧ್ವನಿ ಎತ್ತಬೇಕು ಎಂದರು.ಪ್ರತಿಭಟನೆಯ ಮೂಲಕ ಬೆಳೆ ವಿಮೆಯಿಂದ ವಂಚಿತರಾದ ಎಲ್ಲ ಅರ್ಹ ರೈತರಿಗೆ ತಕ್ಷಣ ವಿಮೆ ಪರಿಹಾರ ಮಂಜೂರು ಮಾಡಬೇಕು, ರೈತರ ಅರ್ಜಿಗಳನ್ನು ಮರುಪರಿಶೀಲಿಸಿ ನ್ಯಾಯ ಒದಗಿಸಬೇಕು ಹಾಗೂ ಸರ್ಕಾರ ರೈತರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು ಎಂದು ಮಲ್ಲಿಕಾರ್ಜುನ ಕಂದಗೂಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
