ಹನುಮ ಧ್ವಜ ತೆರವು ಖಂಡಿಸಿ ಗದಗದಲ್ಲಿ ಬಿಜೆಪಿ ಪ್ರತಿಭಟನೆ

| Published : Jan 30 2024, 02:01 AM IST

ಸಾರಾಂಶ

ಜಿಲ್ಲಾಡಳಿತ ಭವನದ ಎದುರಿಗೆ ಸೋಮವಾರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಮಂಡ್ಯ ಕೆರಗೋಡು ಗ್ರಾಮದಲ್ಲಿನ ಹಾರಿಸಿದ್ದ ಹನುಮ ಧ್ವಜವನ್ನು ತೆರವುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕಾರ್ಯಕರ್ತರು ಜಿಲ್ಲಾಡಳಿತ ಮುಂಭಾಗದ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗದಗ: ಜಿಲ್ಲಾಡಳಿತ ಭವನದ ಎದುರಿಗೆ ಸೋಮವಾರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಮಂಡ್ಯ ಕೆರಗೋಡು ಗ್ರಾಮದಲ್ಲಿನ ಹಾರಿಸಿದ್ದ ಹನುಮ ಧ್ವಜವನ್ನು ತೆರವುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕಾರ್ಯಕರ್ತರು ಜಿಲ್ಲಾಡಳಿತ ಮುಂಭಾಗದ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ರಾಜ್ಯ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುತ್ತಿದೆ. ಅನಗತ್ಯವಾಗಿ ಹಿಂದುಗಳ ಮೇಲೆ ದೌರ್ಜನ್ಯವನ್ನು ನಡೆಸಲಾಗುತ್ತಿದೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿರುವ ಪ್ರಕರಣ ಈಗ ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣಗಳನ್ನು ಗಮನಿಸಿದಾಗ ರಾಜ್ಯ ಸರ್ಕಾರ ಹಿಂದೂ ವಿರೋಧಿಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹಿಂದುಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷದವರಿಗೆ ಅದೇಕೆ ಸಮಸ್ಯೆಯಾಗುತ್ತಿದೆ, ಹಿಂದು ಕಾರ್ಯಕರ್ತರನ್ನೇ ಗುರಿಯಾಗಿಸಿ ಲಾಠಿ ಚಾರ್ಜ್‌ ಮಾಡಿಸಿದ್ದಾರೆ. ಸರ್ಕಾರ ಪದೇ ಪದೇ ಹಿಂದುಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮೇಲಿಂದ ಮೇಲೆ ಈ‌ ರೀತಿಯ ಘಟನೆಗಳು ನಡೆಯುತ್ತಿವೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು. ನೂರಾರು ಕಾರ್ಯಕರ್ತರು, ಮುಖಂಡರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಖಂಡ ಎಂ.ಎಸ್. ಕರೀಗೌಡ್ರ, ಜಗನ್ನಾಥಸಾ ಭಾಂಡಗೆ, ಮಹೇಶ ದಾಸರ, ಅನಿಲ ಅಬ್ಬಿಗೇರಿ, ಲಕ್ಷ್ಮಣ ದೊಡ್ಡಮನಿ, ಮಾಂತೇಶ ನಲವಡಿ, ಸ್ವಾತಿ ಅಕ್ಕಿ, ವಿನಾಯಕ ಮಾನ್ವಿ, ಸುಧೀರ ಕಾಟಿಗೇರ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು ಇದ್ದರು.