ಫೆ.12ರಂದು ಬಿಜೆಪಿ ಪ್ರತಿಭಟನೆ: ಹರ್ಷಾನಂದ

| Published : Feb 08 2024, 01:38 AM IST

ಸಾರಾಂಶ

2023-24ನೇ ಸಾಲಿನ 15ನೇ ಹಣಕಾಸು ಆಯೋಗದ 2.9 ಕೋಟಿ ವೆಚ್ಚದ, ಎಸ್‍ಎಫ್‍ಸಿಯ 90 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಸಾಮಾನ್ಯ ಸಭೆ ಕರೆಯದೆ ಪುರಸಭೆಯ ಮುಖ್ಯಾಧಿಕಾರಿ ಆಡಳಿತಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅನುಮೋದನೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

ಶಾಸಕ ಬಿ.ಆರ್. ಪಾಟೀಲರನ್ನೇ ಕ್ಷೇತ್ರದಲ್ಲಿ ಪವರ್‌ಲೆಸ್‌ ಮಾಡಿರುವ ಅವರ ಸಹೋದರನ ಪುತ್ರ ಆರ್.ಕೆ. ಪಾಟೀಲ ಬಹಿರಂಗವಾಗಿಯೇ ಸಂಪೂರ್ಣವಾಗಿ ಅಪರೋಕ್ಷವಾಗಿ ಆಡಳಿತ ನಡೆಸುವ ಮೂಲಕ ಪ್ರಜ್ವಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ ಅವರು ಆರ್.ಕೆ. ಪಾಟೀಲ ವಿರುದ್ಧ ಹರಿಹಾಯ್ದರು.

ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಜನರಲ್ಲಿ ಶಾಸಕರು ಯಾರಿದ್ದಾರೆ ಎಂಬುದು ಗೊಂದಲ ಉಂಟಾಗಿದೆ. ಏಕೆಂದರೆ ಆರ್.ಕೆ. ಪಾಟೀಲ ಅವರು ಆಡಳಿತಾತ್ಮಕ ನಿರ್ಣಯಗಳು ಬಹಿರಂಗ ಭರವಸೆ ಕೊಡುತ್ತಿದ್ದಾರಷ್ಟೇ ಅಲ್ಲ. ಕೃಷಿ ಸೇರಿ ಇನಿತರ ಅಧಿಕಾರಿಗಳ ವರ್ಗಾವಣೆ ಸೀಫಾರಸು ಪತ್ರಗಳು ಸಹ ಇವರೇ ನೀಡುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಜನ ಸಾಮಾನ್ಯರು ಶಾಸಕರನ್ನು ಸಂಪರ್ಕಿಸುವ ಬದಲು ಆರ್.ಕೆ. ಪಾಟೀಲರನ್ನೇ ಸಂಪರ್ಕಿಸುವಂತ ಕೆಟ್ಟ ಪರಿಸ್ಥಿತಿ ನಿರ್ಮಾಣಮಾಡಿದ್ದಾರೆ. ಅಧಿಕಾರಿಗಳ ಭೇಟಿಗೆ ಬಂದರೆ ಮೊದಲು ನಾವು ಹೇಳಿದವರನ್ನು ವರ್ಗಾವಣೆ ಮಾಡಿ ಬನ್ನಿ ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಆರ್.ಕೆ. ಪಾಟೀಲರು ವಾರ್ನಿಂಗ್ ಮಾಡುತ್ತಿದ್ದಾರಂತೆ, ಕ್ಷೇತ್ರದ ಜನರಿಗೆ ಶಾಸಕರು ಸಂಪರ್ಕಕ್ಕೆ ಬರುವ ಬದಲು ಆರ್.ಕೆ. ಪಾಟೀಲರೇ ಎಲ್ಲದಕ್ಕು ಮುಂದೆ ಬರುತ್ತಿದ್ದಾರೆ. ಕಾನೂನು ವ್ಯವಸ್ಥೆ ಇಲ್ಲ. ನಿಯಮಗಳು ಪಾಲನೆಯಾಗುತ್ತಿಲ್ಲ. ಜನರು ವೋಟ್‍ಕೊಟ್ಟವರ ಮುಂದೆ ಸಮಸ್ಯೆ ಹೇಳಿಕೊಳ್ಳಬೇಕೆಂದರೆ ಶಾಸಕರು ಯಾರ ಕೈಗೂ ಸಿಗುತ್ತಿಲ್ಲ ಅವರ ಬದಲಿಗೆ ಆರ್.ಕೆ. ಪಾಟೀಲರೆ ಮುಂದೆ ಬಂದು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

12ರಂದು ಎಸಿ ಕಚೇರಿ ಮುಂದೆ ಧರಣಿ:

ಪಟ್ಟಣದ ಪುರಸಭೆಯಲ್ಲಿ ಸಾಮಾನ್ಯ ಸಭೆ ಕರೆಯದೇ ಕೋಟ್ಯತರ ರು. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ. 2023-24ನೇ ಸಾಲಿನ 15ನೇ ಹಣಕಾಸು ಆಯೋಗದ 2.9 ಕೋಟಿ ವೆಚ್ಚದ, ಎಸ್‍ಎಫ್‍ಸಿಯ 90 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಸಾಮಾನ್ಯ ಸಭೆ ಕರೆಯದೆ ಪುರಸಭೆಯ ಮುಖ್ಯಾಧಿಕಾರಿ ಆಡಳಿತಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅನುಮೋದನೆ ಪಡೆದಿದ್ದಾರೆ ಎಂದು ಹರ್ಷನಂದ ಗುತ್ತೇದಾರ ದೂರಿದ್ದಾರೆ.

ಶಾಸಕ ಬಿ ಆರ್ ಪಾಟೀಲರ ಒತ್ತಡಕ್ಕೆ ಒಳಗಾಗಿ ಮುಖ್ಯಾಧಿಕಾರಿಗಳು ಆಯ್ದ ಕೆಲವು ಕಾಂಗ್ರೆಸ್ ಪಕ್ಷದ ಸದಸ್ಯರ ವಾರ್ಡಗಳಿಗೆ ಮಾತ್ರ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ ಇದರಿಂದ ಉಳಿದ ಸದಸ್ಯರಿಗೆ ತೊಂದರೆಯಾಗಿದೆ ಎಂದರು.

ಒಂದು ವಾರದೊಳಗಾಗಿ ಕ್ರಿಯಾಯೋಜನೆ ವಾಪಸ್ ಪಡೆದು, ಹೊಸದಾಗಿ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆಯಬೇಕು ಮತ್ತು ಸುಳ್ಳು ಮಾಹಿತಿ ನೀಡಿ ಹಿರಿಯ ಅಧಿಕಾರಿಗಳ ದಾರಿ ತಪ್ಪಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಇಲ್ಲದಿದ್ದರೇ ಫೆ. 12 ರಂದು ಸಹಾಯಕ ಆಯುಕ್ತರ ಕಚೇರಿಯ ಮುಂದೆ ಪುರಸಭೆ ಸದಸ್ಯರೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಈಗಾಗಲೇ 11 ಜನ ಪುರಸಭೆ ಸದಸ್ಯರ ಸಹಿಯುಳ್ಳ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಶ್ರೀಶೈಲ ಪಾಟೀಲ, ಸೋಮಶೇಖರ ಹತ್ತರಕಿ, ಶ್ರೀಶೈಲ ಖಜೂರೆ, ಧೋಂಡಿಬಾ ಸಾಳುಂಕೆ, ಶಿವಪುತ್ರ ನಡಗೇರಿ, ಮುಖಂಡ ಪ್ರಭಾಕರ ಘನಾತೆ ಸೇರಿದಂತೆ ಇತರರು ಇದ್ದರು.