ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿ ಆಕ್ರೋಶ

| Published : Dec 21 2024, 01:18 AM IST / Updated: Dec 21 2024, 07:10 AM IST

ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ವಿಧಾನ ಪರಿಷತ್‌ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಅವರ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. 

 ಬೆಳಗಾವಿ : ಬಿಜೆಪಿ ವಿಧಾನ ಪರಿಷತ್‌ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಅವರ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು. ಇದರಿಂದಾಗಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಯಿತು.

ರೈತರ ಮೇಲೆ, ಪಂಚಮಸಾಲಿ ಸಮಾಜದ ಮೇಲೆ ಲಾಠಿ ಪ್ರಹಾರ ನಡೆಸುತ್ತೀರಿ. ಸ್ಪೀಕರ್ ರೂಲಿಂಗ್ ಬದಿಗಿಟ್ಟು ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಿಸಿದ್ದು, ಬಳಿಕ ಪೊಲೀಸರ ಮೂಲಕ ಬಂಧಿಸಲಾಗಿದೆ ಎಂದು ಖಂಡಿಸಿದರು. ಇಡೀ ರಾತ್ರಿ ಸುಮಾರು 500 ಕಿಮೀ ಸುತ್ತಾಡಿಸಿದ್ದಾರೆ. 

ಬಲವಂತವಾಗಿ ವಾಹನದಲ್ಲಿ ಗದಗ, ರಾಮದುರ್ಗ, ಧಾರವಾಡ ಮೊದಲಾದ ಕಡೆಗಳಿಗೆ ಕರೆದೊಯ್ದಿದ್ದಾರೆ. ಜನಪ್ರತಿನಿಧಿಗಳ ಮೇಲೆ ಈ ರೀತಿ ದೌರ್ಜನ್ಯ ಮಾಡುವ ಈ ಸರ್ಕಾರದ ನೀತಿಯನ್ನು ಜನರೂ ಪ್ರಶ್ನಿಸುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಪಕ್ಷ ಕಾಂಗ್ರೆಸ್. ಸಿ.ಟಿ. ರವಿ ಅವರನ್ನು ಎನ್‌ಕೌಂಟರ್‌ ಮಾಡುವ ಹುನ್ನಾರ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ಸಿನ ಗೂಂಡಾಗಳು ಸುವರ್ಣಸೌಧಕ್ಕೆ ಬಂದು ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.   ಕಾಂಗ್ರೆಸ್ ಪಕ್ಷವು ಕಾನೂನು ಮತ್ತು ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿತ್ತು ಎಂದು ಟೀಕಿಸಿದರು.ಸಿ.ಟಿ.ರವಿ ಅವರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿದ್ದು, ನೆತ್ತಿ ಮೇಲೆ ರಕ್ತ ಸುರಿಯುತ್ತಿದ್ದರೂ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಎಂದು ದೂರಿದರು.

ಅನ್ನ, ನೀರು ಕೊಟ್ಟಿಲ್ಲ. ಒಂದು ಲೋಟ ನೀರನ್ನೂ ಕೊಟ್ಟಿಲ್ಲ. ಸಿ.ಟಿ.ರವಿ ಅವರಿಗೆ ಒಂದು ತುತ್ತು ಅನ್ನವನ್ನೂ ಕೊಟ್ಟಿಲ್ಲ ಎಂದು ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು. ಕಾಂಗ್ರೆಸ್ಸಿನ ಒತ್ತಾಯದ ಮೇರೆಗೆ ಪೊಲೀಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ಅಧಿಕಾರ ಶಾಶ್ವತ ಅಲ್ಲ. ಅಧಿಕಾರದ ದರ್ಪ, ಅಮಲಿನಲ್ಲಿ ಮೆರೆಯುವ ನೀವು, ಅಧಿಕಾರದ ಸೊಕ್ಕು, ಮದದಿಂದ ನಮ್ಮ ಮೇಲೆ ಹಲ್ಲೆ ಮಾಡುವ ಕೆಲಸ ಮಾಡುತ್ತಿದ್ದೀರಿ. ಅಧಿಕಾರ ಶಾಶ್ವತ ಅಲ್ಲ ಎಂದು ಎಚ್ಚರಿಸಿದರು.

ವಿಪಕ್ಷ ನಾಯಕ ಆರ್.ಅಶೋಕ, ಉಪನಾಯಕ ಅರವಿಂದ ಬೆಲ್ಲದ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ, ಶಾಸಕರಾದ ಅಭಯ ಪಾಟೀಲ, ಮಹೇಶ್ ತೆಂಗಿನಕಾಯಿ, ಎನ್.ರವಿಕುಮಾರ್, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ಅರುಣ್ ಶಹಪೂರ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ ಸ್ಥಳೀಯ ಮುಖಂಡರು ಮತ್ತು ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.