ಬೆಳೆ ಹಾನಿ ತಾರತಮ್ಯ ಸರಿಪಡಿಸುವುದು, ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಬ್ಯಾಡಗಿ:ಬೆಳೆ ಹಾನಿ ತಾರತಮ್ಯ ಸರಿಪಡಿಸುವುದು, ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಸುಭಾಸ್ ಸರ್ಕಲ್‌ನಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ಮೋಟೆಬೆನ್ನೂರು ರಸ್ತೆ ಮೂಲಕ ಸಾಗಿ, ತಹಸೀಲ್ದಾರ್ ಕಚೇರಿ ತಲುಪಿತು. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮೆರವಣಿಗೆಯುದ್ದಕ್ಕೂ ಘೋಷಣೆಗಳನ್ನು ಕೂಗಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ರೈತ ವಿರೋಧಿ ಧೋರಣೆ ತಳೆಯುತ್ತಾ ಬಂದಿದೆ. ನಾವು ನೀಡುತ್ತಿದ್ದ ₹4 ಸಾವಿರ ಸಹಾಯಧನ ಸ್ಥಗಿತಗೊಳಿಸಲಾಗಿದೆ. ರಾಜ್ಯ ನೀರಾವರಿ ಯೋಜನೆಗಳಿಗೆ ಹಣಕಾಸಿನ ನೆರವು ನೀಡಿಲ್ಲ, ಹಣವನ್ನು ಕೇವಲ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಬೆಳೆಹಾನಿ ನೀಡಲಾಗುತ್ತಿದೆ. ಹಾಗಿದ್ದರೆ ಇನ್ನುಳಿದವರ ರೈತರಲ್ಲವೇ? ಅವರಿಗೆ ಹಾನಿಯಾಗಿಲ್ಲವೇ? ಕೂಡಲೇ ರಾಜ್ಯದ ಎಲ್ಲ ರೈತರಿಗೂ ಬೆಳೆಹಾನಿ ಹಣ ನೀಡಬೇಕು ಎಂದು ಆಗ್ರಹಿಸಿದರು.
100 ಕ್ವಿಂಟಲ್ ಖರೀದಿಸಿ: ಕೇಂದ್ರ ಸರ್ಕಾರ ಈಗಾಗಲೇ ₹ 2400ಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಮೀನ ಮೇಷ ಎಣಿಸುತ್ತಿದ್ದು, ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು. ಪ್ರತಿ ರೈತರು ಬೆಳೆದಂತಹ 100 ಕ್ವಿಂಟಲ್ ಗೋವಿನಜೋಳ ಖರೀದಿಸುವಂತೆ ಆಗ್ರಹಿಸಿದರು.ರೈತ ವಿರೋಧಿ ಸರಕಾರ: ಬಸವರಾಜ ಛತ್ರದ ಮಾತನಾಡಿ, ಬಿಜೆಪಿ ಅವಧಿಯಲ್ಲಿ ರೈತರ ಶ್ರೇಯೋಭಿವೃದ್ಧಿಗೆ ಜಾರಿಗೆ ತರಲಾಗಿದ್ದ ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ ಯೋಜನೆ, ಡೀಸೆಲ್ ಸಬ್ಸಿಡಿ ಸೇರಿದಂತೆ ಎಲ್ಲ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕಿದೆ. ಇದರೊಟ್ಟಿಗೆ ತುಂತುರು ನೀರಾವರಿ ಪರಿಕರ ದರ ಹೆಚ್ಚಳ, ಟಿಸಿ ದುಬಾರಿ, ಸ್ಟ್ಯಾಂಪ್ ಬೆಲೆ ಹೆಚ್ಚಳ ಮಾಡಿ ರೈತರ ಬದುಕನ್ನು ದುಸ್ತರವಾಗಿಸಿದೆ ಎಂದರು.
20 ಕ್ವಿಂಟಲ್ ನಿಯಮ ತೆಗೆದು ಹಾಕಿ: ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬೆಳೆ ಸಮೀಕ್ಷೆ ಪಾರದರ್ಶಕವಾಗಿ ನಡೆಸದೆ ರೈತರಿಗೆ ಅನ್ಯಾಯ ಮಾಡಿದೆ. ಖರೀದಿ ಕೇಂದ್ರ ಪುಸ್ತಕದಲ್ಲಿ ಮಾತ್ರ ಉಳಿದಿದೆ. ಪ್ರತಿ ತಾಲೂಕು ಕೇಂದ್ರದಲ್ಲಿಯೇ ಖರೀದಿ ಕೇಂದ್ರ ಆರಂಭಿಸಬೇಕು. ರೈತರಿಗೆ ಹಾಕುತ್ತಿರುವ ನಿಬಂಧನೆಗಳನ್ನು ತೆಗೆಯುವಂತೆ ಆಗ್ರಹಿಸಿದರು.ಪುರಸಭೆ ಮಾಜಿ ಸದಸ್ಯರಾದ ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಸರೋಜಾ ಉಳ್ಳಾಗಡ್ಡಿ, ಹನುಮಂತ ಮ್ಯಾಗೇರಿ, ಸುಭಾಷ ಮಾಳಗಿ, ವಿನಯ ಹಿರೇಮಠ, ಮಾಜಿ ತಾಲೂಕಾಧ್ಯಕ್ಷರಾದ ಶಿವಯೋಗಿ ಶಿರೂರ, ಹಾಲೇಶ ಜಾಧವ, ಸುರೇಶ ಆಸಾದಿ, ರೈತ ಮೋರ್ಚಾ ಅಧ್ಯಕ್ಷ ಶಿವಾನಾಂದ ಕಡಗಿ, ಮುಖಂಡರಾದ ಶಿವಬಸಣ್ಣ ಕುಳೇನೂರ, ವೀರೇಂದ್ರ ಶೆಟ್ಟರ, ವಿಜಯ ಭರತ ಬಳ್ಳಾರಿ, ಮುರಿಗೆಪ್ಪ ಶೆಟ್ಟರ, ಶಂಕರಗೌಡ ಪಾಟೀಲ, ವಿಜಯ ಮಾಳಗಿ, ಎಂ.ಎಸ್. ಪಾಟೀಲ, ಶಂಕ್ರಪ್ಪ ಅಕ್ಕಿ, ಶೇಖರಗೌಡ್ರ ಗೌಡ್ರ, ಸಿದ್ದಯ್ಯ ಪಾಟೀಲ, ಭೀಮಣ್ಣ ನಾಯ್ಕರ, ಶಿವಣ್ಣ ಕುಮ್ಮೂರ, ಮಲ್ಲೇಶಪ್ಪ ಬಣಕಾರ, ಉಮೇಶ ರಟ್ಟಿಹಳ್ಳಿ, ಯಶೋಧರ ಅರ್ಕಾಚಾರಿ, ಎಂ.ಜೆ. ಪಾಟೀಲ. ಅರ್ಜುನಪ್ಪ ಲಮಾಣಿ, ನಾಗರಾಜ ಹಾವನೂರ, ಎಚ್.ಆರ್. ಲಮಾಣಿ, ಜಿತೇಂದ್ರ ಸುಣಗಾರ, ಗಂಗನಗೌಡ ಪಾಟೀಲ, ವಿದ್ಯಾಶೆಟ್ಟಿ, ಗುತ್ತೆಮ್ಮ ಮಾಳಗಿ, ಜ್ಯೋತಿ ಕುದರಿಹಾಳ, ಲಲಿತಾ ಹೆಡಿಯಾಲ ಉಪಸ್ಥಿತರಿದ್ದರು.