ಸಾರಾಂಶ
ಕಾರವಾರ: ಸಂವಿಧಾನ ಬದಲಾವಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ಕಾರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಡಿ.ಕೆ. ಶಿವಕುಮಾರ ವಿರುದ್ಧ ಘೋಷಣೆಗಳನ್ನು ಕೂಗಿ, ಸಂವಿಧಾನ ರಕ್ಷಣೆಗೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ, ರೂಪಾಲಿ ಎಸ್.ನಾಯ್ಕ ಮಾತನಾಡಿ, ಸಂವಿಧಾನ ಬದಲಾಯಿಸುವ ಮಾತುಗಳನ್ನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನತೆಯ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಮೂಲಕ ಸಂವಿಧಾನ ವಿರೋಧಿ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಈಗ ಸಂವಿಧಾನವನ್ನೇ ಬದಲಾಯಿಸುವ ಮಾತುಗಳನ್ನಾಡಿದ್ದಾರೆ.ನಂತರ ಹಾಗೆ ಮಾತನಾಡಿಲ್ಲ ಎಂದು ಹೇಳುತ್ತಾರೆ. ಆದರೆ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾಯಿಸುವುದಾಗಿ ಹೇಳಿದ ವಿಡಿಯೋ ನಮ್ಮೆಲ್ಲರ ಮುಂದಿದೆ.ಡಾ. ಬಾಬಾ ಸಾಹೇಬ ಅಂಬೇಡ್ಕರ್ ಎಲ್ಲರ ಹಿತ ಗಮನದಲ್ಲಿಟ್ಟು ಸಂವಿಧಾನ ರಚಿಸಿದರು.ಆದರೆ ಕಾಂಗ್ರೆಸ್ ಧರ್ಮಾಧಾರಿತವಾಗಿ ಮೀಸಲಾತಿ ನೀಡಿ ಸಂವಿಧಾನದ ಆಶಯ ಗಾಳಿಗೆ ತೂರುತ್ತಿದೆ. ಮುಸ್ಲಿಂ ವೋಟ್ ಬ್ಯಾಂಕ್ ಗಾಗಿ ಅವರ ಓಲೈಕೆಗಾಗಿ ಇಂತಹ ಕೆಲಸಗಳನ್ನು ಮಾಡುತ್ತಿದೆ. ಮುಸ್ಲಿಂರ ಅಭಿವೃದ್ಧಿ ಕಾಂಗ್ರೆಸ್ ಗೆ ಬೇಕಿಲ್ಲ.ಅವರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಗುತ್ತಿಗೆಯನ್ನು ಎಲ್ಲ ಧರ್ಮದವರೂ ಪಡೆಯುತ್ತಿದ್ದಾರೆ. ಆದರೆ ಮುಸ್ಲಿಂರನ್ನು ಪ್ರತ್ಯೇಕಿಸುವುದು ಏಕೆಂದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಹಲವು ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ಈಗ ಉಪ ಮುಖ್ಯಮಂತ್ರಿಯ ಬಾಯಲ್ಲಿ ಸಂವಿಧಾನವನ್ನೇ ಬದಲಾಯಿಸುವ ಮಾತುಗಳು ಹೊರಬಿದ್ದಿವೆ. ಇದು ಖಂಡನೀಯ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ನಾಗೇಶ ಕುರಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ ಗುನಗಿ, ನಗರ ಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಡಾ. ನಿತಿನ್ ಪಿಕಳೆ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ ಮತ್ತಿತರರು ಇದ್ದರು.
ಡಿ.ಕೆ.ಶಿವಕುಮಾರ ಪ್ರತಿಕೃತಿ ದಹನಕ್ಕೆ ಪೊಲೀಸರು ಅವಕಾಶ ಕೊಡದೆ ಪ್ರತಿಕೃತಿಯನ್ನು ಕೊಂಡೊಯ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಪೊಲೀಸರನ್ನು ಬಳಸಿಕೊಂಡು ಪ್ರತಿಭಟನೆಯನ್ನು ಹತ್ತಿಕ್ಕುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))