ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಸ್ಥಳೀಯ ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ ಅಸುಂಡಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಿಜೆಪಿ ಮಂಡಲ ವತಿಯಿಂದ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಧಿಕಾರ ಕೂಗುತ್ತ ತಹಸೀಲ್ದಾರ ಕಚೇರಿಯವರೆಗೆ ಪ್ರತಿಭಟನೆ ಮೂಲಕ ತೆರಳಿ ಕಚೇರಿಯ ಮುಂಭಾಗದಲ್ಲಿ ಭಜನೆ ಮಾಡುತ್ತ ಧರಣಿ ನಡೆಸಿದರು.ಮಂಡಲ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಮಾತನಾಡಿ, ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿ ಸದಸ್ಯನ ಅಪಹರಣ ಮಾಡಿದ್ದು, ಪೊಲೀಸ್ ಅಧಿಕಾರಿಗಳಿಗೆ ದೂರು, ಮನವಿ ಸಲ್ಲಿಸಿದ್ದರೂ ಅಧಿಕಾರಿಗಳಿಂದ ಸ್ಪಂದನೆ ದೊರೆತಿಲ್ಲ, ಸೋಮವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪಪಂ ಚುನಾವಣೆ ಮುಂದೂಡಬೇಕು. ಇಲ್ಲದಿದ್ದರೆ ಸೋಮವಾರ ಶಕ್ತಿ ಕೇಂದ್ರದ ನೂರಾರು ಕಾರ್ಯಕರ್ತರು ತೀವ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.ಜಿಲ್ಲಾ ಪ್ರದಾನ ಕಾರ್ಯದರ್ಶಿ ಕೆ.ವಿ. ಪಾಟೀಲ, ಬಿ.ಎಫ್. ಕೊಳದೂರ, ನಿಂಗನಗೌಡ ದೊಡ್ಡಗೌಡರ, ಉಳವಪ್ಪ ಉಳ್ಳೆಗಡ್ಡಿ, ದಿನೇಶ ವಳಸಂಗ, ನಿಜಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ಉಳ್ಳೇಗಡ್ಡಿ, ಶಿವಾನಂದ ಹನುಮಸಾಗರ, ರಮೇಶ ಉಗರಖೋಡ, ಮಹಾಂತೇಶ ಗಿರನಟ್ಟಿ, ಹರೀಶ ಕರಿಕಟ್ಟಿ ಸೇರಿ ಬಿಜೆಪಿ ಕಾರ್ಯಕರ್ತರು ಇದ್ದರು.
ಪಪಂ ಚುನಾವಣೆಯಲ್ಲಿ ಬೆಂಬಲಿಸುವಂತೆ ಕಾಂಗ್ರೆಸ್ ನಾಯಕರು ನನಗೆ ಹಾಗೂ ನನ್ನ ಮಗನನ್ನು ಸಂಪರ್ಕಿಸಿ ಆಮಿಷ ಒಡ್ಡಿದ್ದರು. ಆದರೆ, ಅದನ್ನು ನಿರಾಕರಿಸಿದ್ದರಿಂದ ಈ ಘಟನೆ ನಡೆದಿದೆ, ಮಗ ನಾಗರಾಜ ತನ್ನ ತಾಯಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾನೆ. ಬೆಂಗಳೂರಿನ ಯಾವುದೋ ರೆಸಾರ್ಟ್‌ನಲ್ಲಿದ್ದು ಅಪಹರಣಕಾರರು ಬಿಟ್ಟ ಕೂಡಲೇ ಮರಳಿ ಮನೆಗೆ ಬರುತ್ತೆನೆಂದು ತಿಳಿಸಿದ್ದಾನೆ.-ಬಸವರಾಜ ಅಸುಂಡಿ
ಅಪಹರಣಕ್ಕೊಳಗಾದ ಪಪಂ ಸದಸ್ಯನ ತಂದೆ.