ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆಯ ವಿರುದ್ಧ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ 12 ವೈದ್ಯರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಓರ್ವ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣಪುಟ್ಟ ಖಾಯಿಲೆಗಳು ಬಂದರೂ ಇಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಆಸ್ಪತ್ರೆಗೆ ಬರುವ ಬಹುಪಾಲು ರೋಗಿಗಳನ್ನು ಮಡಿಕೇರಿ, ಮೈಸೂರು, ಮಂಗಳೂರಿಗೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಬಡ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸ್ಥಳೀಯ ಶಾಸಕರು, ಕಾಂಗ್ರೆಸ್ ಸರ್ಕಾರ ವೈದ್ಯರ ಭರ್ತಿಗೆ ಕ್ರಮ ವಹಿಸಿಲ್ಲ ಎಂದು ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಅಸಮಾಧಾನ ಹೊರ ಹಾಕಿದರು.ಪ್ರತಿನಿತ್ಯ ಕನಿಷ್ಟ 200 ಮಂದಿ ಹೊರರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಾರೆ. 12 ಜನ ವೈದ್ಯರು ಸರ್ಕಾರಿ ನಿಯಮದಂತೆ ಇರಬೇಕು. ಆದರೆ ಓರ್ವರು ಮಾತ್ರ ಇದ್ದಾರೆ. ಸ್ವತಃ ವೈದ್ಯರೇ ಆಗಿರುವ ಶಾಸಕರಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅವರಿಗೆ ಜನರ ಸಮಸ್ಯೆ ಕಣ್ಣಿಗೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಮಂಡಲ ಅಧ್ಯಕ್ಷ ಗೌತಮ್ ಮಾತನಾಡಿ, ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಗಮನ ಹರಿಸಬೇಕು. ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ತಾಲೂಕು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಾಜಿ ಅಧ್ಯಕ್ಷ ದರ್ಶನ್ ಜೋಯಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಪಕ್ಷದ ಮುಖಂಡರಾದ ಮನು ರೈ, ಲೋಕೇಶ್ವರಿ ಗೋಪಾಲ್, ಶ್ರೀನಿಧಿ ಲಿಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.