ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಬೆಳೆಸಿ: ಮೌಲಾನ ಮುಫ್ತಿ ಮಹಮ್ಮದ್ ಅಲಿ ಖಾಜಿ

| Published : Jun 11 2024, 01:31 AM IST

ಸಾರಾಂಶ

ಮಕ್ಕಳಲ್ಲಿ ದೇಶಾಭಿಮಾನ, ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸಬೇಕು

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ । ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಫ್ತಿ ಮಹಮ್ಮದ್ ಅಲಿ ಖಾಜಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಕ್ಕಳಲ್ಲಿ ದೇಶಾಭಿಮಾನ, ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸಬೇಕು ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಫ್ತಿ ಮಹಮ್ಮದ್ ಅಲಿ ಖಾಜಿ ಹೇಳಿದರು.

ನಗರದ ಜಿಲ್ಲಾ ಸರ್ಕಾರಿ ನೌಕರರ ಸಾಂಸ್ಕೃತಿಕ ಸಭಾ ಭವನದಲ್ಲಿ ಭಾನುವಾರ ಫಿರ್ದೋಸ್ ಸಾಂಸ್ಕೃತಿಕ ಕ್ರೀಡಾ ಹಾಗೂ ತರಬೇತಿ ಸಂಸ್ಥೆ ವತಿಯಿಂದ ಶಿಕ್ಷಣ ತಜ್ಞ ನಿವೃತ್ತ ಪ್ರಾಧ್ಯಾಪಕ ದಿವಂಗತ ವಹಿದುದ್ದೀನರವರ ಸವಿನೆನಪಿಗಾಗಿ ಏರ್ಪಡಿಸಿದ್ದ 23 24ನೇ ಸಾಲಿನಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಹುಟ್ಟಿ ಬೆಳೆದ ಉರ್ದು ಭಾಷೆ ಅತ್ಯಂತ ಸೊಗಸಾದ ಭಾಷೆ. ಇದು ಕೇವಲ ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ. ಉರ್ದು ಭಾಷೆ ನಮ್ಮ ದೇಶದ ಭಾಷೆ. ನಮ್ಮೆಲ್ಲರ ಭಾಷೆ ಎಂದು ಹೇಳಿದರು.

ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳಲ್ಲಿ ದೇಶ ಅಭಿಮಾನ, ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸಬೇಕು. ಅವರಿಗೆ ಉತ್ತಮ ಸಂಸ್ಕಾರ ನೀಡಿ ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿ ಪ್ರೇರೇಪಿಸುವುದು ಒಳ್ಳೆಯ ಕಾರ್ಯವಾಗಿದೆ ಎಂದರು.

ಹಿರಿಯ ವೈದ್ಯ ಡಾ. ಕೆ.ಜಿ. ಕುಲಕರ್ಣಿ ಮಾತನಾಡಿ, ಎಲ್ಲ ರಂಗದ ಅಭಿವೃದ್ಧಿ ಶಿಕ್ಷಣ ಕ್ಷೇತ್ರದಲ್ಲಿ ಅಡಗಿದೆ. ಮೊದಲು ನಾವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದರು.

ನಗರ ಪೊಲೀಸ್ ಠಾಣೆಯ ಪಿಎಸ್ಐ ಕೆ. ರಾಜಶೇಖರ ಮಾತನಾಡಿದರು. ಮುಸ್ಲಿಂ ಧರ್ಮಗುರು ಮುಫ್ತಿ ನಜೀರ್ ಅಹ್ಮದ್ ಖಾದ್ರಿ, ಸಿರಾಜುದ್ದೀನ್, ಎಂ. ಸಾಧಿಕ ಅಲಿ, ಪಿರ್ದೋಸ್ ಸಾಂಸ್ಕೃತಿಕ ಕ್ರೀಡಾ ಹಾಗೂ ತರಬೇತಿ ಸಂಸ್ಥೆಯ ಅಧ್ಯಕ್ಷ ರಫಿಯುದ್ದೀನ್ ಅಹಮದ್ ಇತರರಿದ್ದರು.