ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

| Published : Apr 06 2025, 01:47 AM IST

ಸಾರಾಂಶ

ವಿಧಾನ ಸಭೆಯಲ್ಲಿ ಬಿಜೆಪಿ ಪಕ್ಷದ ೧೮ ಶಾಸಕರನ್ನು ಅಮಾನತುಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು, ಶಾಸಕರ ಹಕ್ಕನ್ನು ಮೊಟುಕುಗೊಳಿಸುವ ಸ್ಪೀಕರ್ ನಡೆ ಸಂವಿಧಾನ ಬಾಹಿರವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ, ಎಸ್.ಸಿ, ಎಸ್.ಟಿ ಅನುದಾನದ ದುರ್ಬಳಕೆ, ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.೪ ಮೀಸಲಾತಿ ಖಂಡಿಸಿ ಹಾಗೂ ಸದನದಿಂದ ೧೮ ಬಿಜೆಪಿ ಶಾಸಕರ ೬ ತಿಂಗಳ ಅಮಾನತು ವಿರೋಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಶನಿವಾರ ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಮುಖಂಡರಾದ ಬಿ. ವೇದಾವತಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ನಿರಂತರ ಡಿಸೇಲ್ ಮತ್ತು ಹಾಲಿನ ದರ ಸೇರಿದಂತೆ ದಿನಬಳಕೆ ವಸ್ತಗಳ ಬೆಲೆ ಏರಿಕೆ ಮಾಡುತ್ತಿದ್ದು, ಮಧ್ಯಮ ಮತ್ತು ಬಡ ಜನರು ಜೀವನ ನಡೆಸಲು ದುಸ್ತರವಾಗಿದೆ. ಅಲ್ಲದೆ ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಯಲ್ಲಿ ಶೇಕಡ ೪ ರಷ್ಟು ಮೀಸಲಾತಿ ನೀಡುತ್ತಿರುವುದು ಧರ್ಮಾಧಾರಿತ. ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲದಿರುವುದರಿಂದ ಇದು ಅಸಂವಿಧಾನಿಕ ಕ್ರಮವಾಗಿದೆ. ಎಸ್.ಸಿ.ಪಿ. ಮತ್ತು ಟಿ.ಎಸ್.ಪಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.

ವಿಧಾನ ಸಭೆಯಲ್ಲಿ ಬಿಜೆಪಿ ಪಕ್ಷದ ೧೮ ಶಾಸಕರನ್ನು ಅಮಾನತುಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು, ಶಾಸಕರ ಹಕ್ಕನ್ನು ಮೊಟುಕುಗೊಳಿಸುವ ಸ್ಪೀಕರ್ ನಡೆ ಸಂವಿಧಾನ ಬಾಹಿರವಾಗಿದೆ. ಹಾಗಾಗಿ ಈ ಎಲ್ಲಾ ಜನವಿರೋಧಿ ನೀತಿಗಳನ್ನು ಬಿಜೆಪಿಯು ಉಗ್ರವಾಗಿ ವಿರೋಧಿಸುತ್ತದೆ. ಗ್ಯಾರಂಟಿ ಸರಿದೂಗಿಸಲು ಇಂತಹ ನಿರ್ಧಾರಗಳು ಸಾಮಾನ್ಯ ಜನರಿಗೆ ಹೊರೆಯಾಗಲಿವೆ. ರಾಜ್ಯ ಸರ್ಕಾರದ ಈ ಎಲ್ಲ ಜನವಿರೋಧಿ ನೀತಿಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ತಿಳಿಸಲಾಗುತ್ತದೆ ಎಂದು ಹೇಳಿದರು.