ಕನ್ನಡಪ್ರಭ ವಾರ್ತೆ ಪಾಂಡವಪುರ

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟ್ಟಿದ್ದ ನಾರಿಶಕ್ತಿ ವಂದನಾ ಮಹಿಳಾ ಮೀಸಲಾತಿ ಬಿಲ್‌ಗೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಸಂಸತ್‌ನಲ್ಲಿ ಸೋಲಾಗುವಂತೆ ಮಾಡಿದ್ದನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಐದು ದೀಪದ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ವಿರುದ್ಧ ಘೋಷಣೆ ಕೂಗಿದರು. ಕಾಯ್ದೆ ಜಾರಿಗೆ ಹಿನ್ನೆಡೆಗೆ ಕಾರಣವಾದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ದೇಶದ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷ ಮಂಗಳ ನವೀನ್‌ಕುಮಾರ್ ಮಾತನಾಡಿ, ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಉದ್ದೇಶದಿಂದ ಪ್ರಧಾನಿ ಮೋದಿ ಸರ್ಕಾರ ತರಲು ಹೊರಟಿದ್ದ ನಾರಿಶಕ್ತಿ ವಂದನಾ ಮಹಿಳಾ ಮೀಸಲಾತಿ ಬಿಲ್‌ಗೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಸಂಸತ್‌ನಲ್ಲಿ ವಿರೋಧಿಸಿ ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಮಹಿಳಾ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮೊದಲಿಂದಲೂ ಮಹಿಳೆಯರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಕೆಲಸ ಮಾಡಿಲ್ಲ. ಕಾಂಗ್ರೆಸ್ ನವರು ಮಸೂದೆಯನ್ನು ಸೋಲಿಸಿ ಸಂಭ್ರಮಿಸಿದ್ದಾರೆ. ನಾರಿ ಶಕ್ತಿಗೆ ಅವಮಾನ ಮಾಡಿದ್ದಾರೆ. ಇದು ಮಸೂದೆಯ ಸೋಲಲ್ಲ ಇದು ದೇಶದ ಮಹಿಳೆಯರ ಸೋಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.


ತಾಲೂಕು ಅಧ್ಯಕ್ಷ ಧನಂಜಯ್ ಮಾತನಾಡಿ, ದೇಶದ ಮಹಿಳೆಯರ ಮೀಸಲಾತಿ ಕೊಡಬೇಕು ಎಂಬ ದಶಕಗಳ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ಮೋದಿ ಅವರ ಸರ್ಕಾರ ಸಂಸತ್‌ನಲ್ಲಿ ಮಹಿಳಾ ಬಿಲ್‌ನನ್ನು ಮಂಡಿಸಿದಾಗ, ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ರಾಜಕೀಯ ದೊಂಬರಾಟಕ್ಕೆ ಬಿಲ್‌ನ್ನು ವಿರೋಧಿಸುವ ಮೂಲಕ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ನಗರ ಘಟಕದ ಅಧ್ಯಕ್ಷ ಸೋಮಶೇಖರ್, ಮೇಲುಕೋಟೆ ಮಂಡಲ ಅಧ್ಯಕ್ಷ ಎಸ್.ಎನ್.ಟಿ.ಸೋಮಶೇಖರ್, ಪುರಸಭೆ ಮಾಜಿ ಸದಸ್ಯ ಅಶೋಕ್, ರಾಮು, ರಾಮಚಂದ್ರು, ಚನ್ನೇಗೌಡ, ಚಲುವರಾಜು, ನಿರ್ಮಲಾಆನಂದ, ಶೋಭಾ ಪಿ.ಗೌಡ, ಪುರುಷೊತ್ತಮ್, ಮಹದೇವಸ್ವಾಮಿ, ಸಿ.ಕೆ.ರಮೇಶ್, ಮಂಜಾಚಾರಿ ಸೇರಿದಂತೆ ಹಲವರು ಇದ್ದರು.