ತಾಪಂ ಕಚೇರಿಗೆ ಬೀಗ ಜಡಿದು ಬಿಜೆಪಿ ಪ್ರತಿಭಟನೆ

| Published : Jun 23 2025, 11:52 PM IST

ಸಾರಾಂಶ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿದೆ. ಸರ್ಕಾರವನ್ನು ಅಮಾನತ್ತುಗೊಳಿಸಿ ತಕ್ಷಣವೇ ರಾಷ್ಟ್ರಪತಿ ಆಡಳಿತ ರಾಜ್ಯದಲ್ಲಿ ಹೇರಬೇಕೆಂದು ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬೀಳಗಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿದೆ. ಸ್ವಪಕ್ಷ ಶಾಸಕರೇ ಸರ್ಕಾರದ ವಿರುದ್ಧ ಆಪಾದನೆಗಳನ್ನು ಮಾಡುತ್ತಿರುವುದಕ್ಕೆ ಭ್ರಷ್ಟಾಚಾರಕ್ಕೆ ಇಂಬು ತಂದಿದೆ. ಈಗಿರುವ ಕಾಂಗ್ರೆಸ್ ಸರ್ಕಾರವನ್ನು ಅಮಾನತ್ತುಗೊಳಿಸಿ ತಕ್ಷಣವೇ ರಾಷ್ಟ್ರಪತಿ ಆಡಳಿತ ರಾಜ್ಯದಲ್ಲಿ ಹೇರಬೇಕೆಂದು ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬೀಳಗಿ ಆಕ್ರೋಶ ಹೊರಹಾಕಿದರು.

ಇಲ್ಲಿನ ತಾಪಂ ಕಾರ್ಯಾಲಯದ ಮುಂಭಾಗದಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು. ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಿಂದಾಗಿ ರಾಜ್ಯದ ಜನರು ಪಾಶ್ಚಾತ್ತಾಪ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಹಗರಣಗಳು ಉಂಟಾಗುತ್ತಿವೆ. ಎರಡು ವರ್ಷಗಳಿಂದ ರಬಕವಿ ಬನಹಟ್ಟಿ ತಾಲೂಕಿಗೆ ಯಾವುದೇ ಮನೆಗಳು ಬಂದಿಲ್ಲ. ಇದರಿಂದಾಗಿ ಇಲ್ಲಿಯ ಬಡವರು ಪರದಾಡುತ್ತಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಹಣ ಕೊಟ್ಟರೆ ಮಾತ್ರ ಮನೆಗಳನ್ನು ನೀಡುತ್ತಿದೆ ಇದು ಖಂಡನೀಯವಾಗಿದೆ. ಕಾಂಗ್ರೆಸ್ ಶಾಸಕ ರಾಜು ಕಾಗಿಯವರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಗೆ ಹಾಜರಾಗದೆ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದಾರಾಮಯ್ಯ ಕೂಡ ಮುಡಾ ಹಗರಣದಲ್ಲಿದ್ದರು. ಹಗರಣಗಳಿಂದಲೇ ಕೂಡಿದ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ನಡೆಯುತ್ತಿಲ್ಲ ಎಂದು ಸುರೇಶ ಅಕ್ಕಿವಾಟ ಆರೋಪಿಸಿದರು. ಬಿಜೆಪಿ ಮುಖಂಡರಾದ ವಿದ್ಯಾಧರ ಸವದಿ, ಶಿವಾನಂದ ಗಾಯಕವಾಡ, ಶಂಕರ ಹುನ್ನೂರ ಮಾತನಾಡಿದರು. ಪ್ರತಿಭಟನೆಯಲ್ಲಿ ಸಂಜಯ ತೆಗ್ಗಿ, ಶಂಕರಗೌಡ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ವಿದ್ಯಾ ಧಬಾಡಿ, ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ಸವಿತಾ ಹೊಸೂರ, ದುರ್ಗವ್ವ ಹರಿಜನ, ಆನಂದ ಕಂಪು, ಅರುಣ ಬುದ್ನಿ, ಅಶೋಕ ರಾವಳ, ಈರಣ್ಣ ಚಿಂಚಖಂಡಿ, ಸದಾಶಿವ ಪರೀಟ, ಡಾ.ಶಂಕರ ವಸ್ತ್ರದ, ಮಹಾಲಿಂಗ ಕುಳ್ಳೊಳ್ಳಿ, ರವಿ ಕೊರ್ತಿ ಸೇರಿದಂತೆ ಅನೇಕರಿದ್ದರು.