ಸಾರಿಗೆ ಬಸ್‌ಗಳಿಗೆ ಪೋಸ್ಟರ್ ಅಂಟಿಸಿ ಬಿಜೆಪಿ ಪ್ರತಿಭಟನೆ

| Published : Jan 05 2025, 01:32 AM IST

ಸಾರಿಗೆ ಬಸ್‌ಗಳಿಗೆ ಪೋಸ್ಟರ್ ಅಂಟಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಸಾರಿಗೆ ಬಸ್ಸುಗಳಿಗೆ ಪೋಸ್ಟರ್‌ಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದರು.

ರಾಮನಗರ: ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಸಾರಿಗೆ ಬಸ್ಸುಗಳಿಗೆ ಪೋಸ್ಟರ್‌ಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನಿಂದ ಮೈಸೂರಿನತ್ತ ತೆರಳುತ್ತಿದ್ದ ಸಾರಿಗೆ ಬಸ್ಸುಗಳಿಗೆ ಗುತ್ತಿಗೆದಾರನ ಸಾವಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೊಣೆಗಾರರು ಎಂಬ ಬರಹವುಳ್ಳ ಪೋಸ್ಟರ್ ಗಳನ್ನು ಅಂಟಿಸಿದ ಬಳಿಕ ಕಿಲ್ಲರ್ ಖರ್ಗೆ ಎಂದು ಘೋಷಣೆ ಕೂಗುತ್ತಾ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಚೇಲಾಗಳಿಂದಲೇ ತನಗೆ ತೊಂದರೆಯಾಗಿದೆ ಎಂದು ಹೇಳಿ ಸಚಿನ್ ಪಾಂಚಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ನಿಷ್ಪಕ್ಷಪಾತ ತನಿಖೆ ಆಗಬೇಕಿದ್ದರೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಜೊತೆಗೆ ಸಚಿವರು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಸರಣಿ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಈ ಹಿಂದೆ ಈಶ್ವರಪ್ಪನವರ ರಾಜೀನಾಮೆ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆಪಾದಿತ ಸ್ಥಾನದಲ್ಲಿರುವ ಸಚಿವರ ರಾಜೀನಾಮೆ ಏಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ ಚಂದ್ರಶೇಖರಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ನಿಗಮದ ಅಧ್ಯಕ್ಷರಾದ ಶಾಸಕ ಬಸವರಾಜ್ ದದ್ದಲ್, ಬೆಳಗಾವಿಯಲ್ಲಿ ಎಸ್ ಡಿಎ ರುದ್ರಣ್ಣ ಎಡವಣ್ಣನವರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಪಡೆಯಲಿಲ್ಲ. ಬೀದರ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ನಾಯಕ್ ಸಾವಿನ ಪ್ರಕರಣದಲ್ಲಿ ಯಾದಗಿರಿ ಶಾಸಕ ಚನ್ನರೆಡ್ಡಿಯನ್ನು ಏಕೆ ಬಂಧಿಸಲಿಲ್ಲ ಎಂದು ಕೇಳಿದರು.

ಈಗ ಬೀದರ್‌ನಲ್ಲಿ ಗುತ್ತಿಗೆದಾರ ಸಚಿವ ಪಾಂಚಾಲ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಸಹಚರರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅವರ ಕುಟುಂಬದವರು ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಖರ್ಗೆ ತಾವೇ ತೀರ್ಮಾನ ತೆಗೆದುಕೊಂಡು ಸಿಐಡಿ ತನಿಖೆ ಮಾಡುವಂತೆ ಪತ್ರ ಬರೆದಿದ್ದಾರೆ.

ಅಪರಾಧಿ ಸ್ಥಾನದಲ್ಲಿ ನಿಂತಿರುವ ಪ್ರಿಯಾಂಕ್ ಖರ್ಗೆ ಇಂತದ್ದೇ ತನಿಖೆ ನಡೆಸಬೇಕೆಂದು ತೀರ್ಮಾನ ಮಾಡಲು ಯಾವ ಅಧಿಕಾರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಅವರಿಂದ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಅಶ್ವತ್ಥ ನಾರಾಯಣಗೌಡ ಒತ್ತಾಯಿಸಿದರು.

ಬಿಜೆಪಿ ಮುಖಂಡ ಗೌತಮ್ ಗೌಡ ಮಾತನಾಡಿ, 2023ರಿಂದ ರಾಜ್ಯದಲ್ಲಿ ರೈತರು, ಪ್ರಾಮಾಣಿಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸರಣಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅದು ಆತ್ಮಹತ್ಯೆ ಅಲ್ಲ, ರಾಜ್ಯ ಸರ್ಕಾರ ಮಾಡುತ್ತಿರುವ ಕೊಲೆಗಳು. ಈಗ ಗುತ್ತಿಗೆದಾರ ಸಚಿನ್ ರವರು ಸಚಿವ ಪ್ರಿಯಾಂಕ್ ಖರ್ಗೆ ಹೆಸರನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟಾದರೂ ಮಾನಗೆಟ್ಟ ಕಾಂಗ್ರೆಸ್ ಸರ್ಕಾರ ಸಚಿವರನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಕೆಲ ನಾಯಕರು ಬಿಜೆಪಿ ನಾಯಕರನ್ನು ನಿಂದನೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅಲ್ಲದೆ, ಸುಪಾರಿ ನೀಡಿ ವಿಪಕ್ಷ ನಾಯಕರನ್ನು ಹತ್ಯೆಯ ಸಂಚು ರೂಪಿಸುತ್ತಿದ್ದಾರೆ. ಬಿಜೆಪಿ ನಾಯಕ ಸಿ.ಟಿ. ರವಿ ಅವರನ್ನು ಹೇಗೆಲ್ಲ ನಡೆಸಿಕೊಂಡರು ಎಂಬುದನ್ನು ನಾಡಿನ ಜನರು ನೋಡಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳ ಮೂಲಕ ಮುಗ್ಧ ಜನರ ದಿಕ್ಕು ತಪ್ಪಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಈಗ ಗ್ಯಾರಂಟಿಗಳಿಂದಾಗಿ ರಾಜ್ಯ ದಿವಾಳಿಯತ್ತ ಸಾಗಿದೆ. ಸರ್ಕಾರಿ ನೌಕರರಿಗೆ ವೇತನ ಕೊಡಲು ಹಣವಿಲ್ಲ, ರೈತರನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ. ಈಗ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ನಮ್ಮ ರಾಜ್ಯದ ಸಂಪತ್ತನ್ನು ಬೇರೆ ರಾಜ್ಯಗಳ ಚುನಾವಣೆಗೆ ಬಳಸಿಕೊಳ್ಳುತ್ತಿದೆ. ಬೇರೆ ರಾಜ್ಯಕ್ಕೆ ಮಾದರಿಯಾಗಿದ್ದ ಕರ್ನಾಟಕವನ್ನು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ರುದ್ರದೇವರು, ಶಿವಾನಂದ, ಎಸ್.ಆರ್.ನಾಗರಾಜು, ಎಲೆಕೆರೆ ರವೀಶ್, ಚಂದ್ರಶೇಖರ್ ರೆಡ್ಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಲತಾ ಮತ್ತಿತರರು ಭಾಗವಹಿಸಿದ್ದರು.

4ಕೆಆರ್ ಎಂಎನ್ 1,2.ಜೆಪಿಜಿ

1.ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಾರಿಗೆ ಬಸ್ಸಿಗೆ ಪೋಸ್ಟರ್ ಅಂಟಿಸುತ್ತಿರುವುದು.

2.ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.