ಕನ್ನಡಪ್ರಭ ವಾರ್ತೆ ಬೆಳಗಾವಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಪೊಲೀಸರು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾದ ಘಟನೆ ಖಂಡಿಸಿ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಳಗಾವಿಯ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಪೊಲೀಸರು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾದ ಘಟನೆ ಖಂಡಿಸಿ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಳಗಾವಿಯ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಬಿಜೆಪಿ ಮಾಜಿ ಮತ್ತು ಹಾಲಿ ಶಾಸಕರು, ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಎಂಬುವರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ರಾಜಕೀಯ ದ್ವೇಷಕ್ಕಾಗಿ ಒಬ್ಬ ಮಹಿಳೆ ಎಂದು ನೋಡದೆ, ಸಾರ್ವಜನಿಕವಾಗಿ ದೌರ್ಜನ್ಯ ಎಸಗಲು ಪೊಲೀಸರಿಗೆ ಕುಮ್ಮಕ್ಕು ನೀಡಿದ್ದು ನಾಚಿಕೆಗೇಡಿನ ಸಂಗತಿ. ಅಲ್ಲದೆ, ಪೊಲೀಸ್ ಇಲಾಖೆಯ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದಿರುವುದು ಈ ಘಟನೆಯೇ ಸಾಕ್ಷಿಯಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯರವರನ್ನು ತೇಜೋವಧೆ ಮಾಡುವ ಉದ್ದೇಶದಿಂದ ಬಿಲ್ಲವ ಸಂದೇಶ ಎಂಬುವ ವ್ಯಕ್ತಿ ಶಾಸಕಿಯ ಶ್ರದ್ಧಾಂಜಲಿ ಪೋಸ್ಟ್ ಹಾಕಿರುವುದನ್ನು ನೋಡಿದರೆ, ಈತನ ಮನಸ್ಥಿತಿ ಏನು ಎಂದು ಅರ್ಥವಾಗುತ್ತದೆ. ದಲಿತ ಶಾಸಕಿಗೆ ಅಪಮಾನ ಮಾಡಿರುವುದು ಖಂಡನೀಯ. ಜೊತೆಗೆ ಇದುವರೆಗೂ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಬಂಧಿಸದೆ ಇರುವುದು ಸಮಾಜದ ಮಹಿಳೆಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ತಕ್ಷಣ ಆತನನ್ನು ಬಂಧಿಸಿ, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ದಲಿತ ಶಾಸಕಿಗೆ ಅಪಮಾನ ಹಾಗೂ ಮಹಿಳೆಯ ಮೇಲೆ ಮಾಡಿರುವ ದೌರ್ಜನ್ಯ ಖಂಡನೀಯ. ಕೂಡಲೇ ತಪ್ಪಿತಸ್ಥ ಪೊಲೀಸರು ಹಾಗೂ ದಲಿತ ಶಾಸಕಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕರಾದ ಸಂಜಯ್ ಪಾಟೀಲ, ಡಾ.ಸೋನಾಲಿ ಸರ್ನೋಬತ್, ದೀಪಾ ಕುಡಚಿ, ಉಜ್ವಲಾ ಬಡವನಾಚೆ, ಮುರಘೇಂದ್ರಗೌಡ ಪಾಟೀಲ, ಅರವಿಂದ್ ಪಾಟೀಲ, ಎಂ.ಬಿ.ಝಿರಲಿ ಹಾಗೂ ಪ್ರಮುಖ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.