ಅನಿಯಮಿತ ಲೋಡ್ ಶೆಡ್ಡಿಂಗ್ ತಕ್ಷಣ ಸರಿಪಡಿಸಿ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ರೈತರು, ಪಕ್ಷದ ಕಾರ‍್ಯಕರ್ತರು ನಗರದ ಬೆಸ್ಕಾಂನ ಸೂಪರಿಂಟೆಂಡೆಂಟ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಅನಿಯಮಿತ ಲೋಡ್ ಶೆಡ್ಡಿಂಗ್ ತಕ್ಷಣ ಸರಿಪಡಿಸಿ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ರೈತರು, ಪಕ್ಷದ ಕಾರ‍್ಯಕರ್ತರು ನಗರದ ಬೆಸ್ಕಾಂನ ಸೂಪರಿಂಟೆಂಡೆಂಟ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬರದ ತೀವ್ರ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲೂ ಅನಿಯಮಿತವಾಗಿ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಾಂತರ ಕ್ಷೇತ್ರ ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಖರೀದಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ರಾಜ್ಯವನ್ನು ದಿವಾಳಿ ಅಂಚಿಗೆ ತಂದಿದೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಕೂಡಲೇ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಜನರ ಕಷ್ಟ ಬೇಕಾಗಿಲ್ಲ. ಜಿಲ್ಲಾ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಬೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗ್ಗೆ ಚರ್ಚಿಸಿ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಕರೆಂಟ್ ಕಣ್ಣಾಮುಚ್ಚಾಲೆಗೆ ರೈತರು ಜನಸಮಾನ್ಯರು ಹೈರಾಣಾಗಿದ್ದು, ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಸಮಸ್ಯೆ ಬಗೆಹರಿಯದಿದ್ದಲ್ಲಿ, ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ರೈತರ ತೋಟಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು, ಕನಿಷ್ಠ 7 ಗಂಟೆ ವಿದ್ಯುತ್ ನೀಡಬೇಕು. ಅನಿಯಮಿತ ವಿದ್ಯುತ್ ಕಡಿತದಿಂದ ರೈತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಸದ್ಯ ತೋಟಗಳಿಗೆ ಸಮರ್ಪಕವಾಗಿ ಎರಡು ಗಂಟೆಯೂ ವಿದ್ಯುತ್ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಮಾತನಾಡಿ, ಜಿಲ್ಲೆಯಲ್ಲಿ ಅವೈಜ್ಞಾನಿಕವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ಮಾಡದೇ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ವಿದ್ಯುತ್ ಸಮಸ್ಯೆ ಇದ್ದು, ಸಾರ್ವಜನಿಕರು, ರೈತರು ತೊಂದರೆ ಅನುಭವಿಸುತ್ತಿದ್ದರೂ ಜಿಲ್ಲಾ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ. ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಉಪ ಮುಖ್ಯಮಂತ್ರಿ ಪರಮೇವರ್, ಜಿಲ್ಲಾಧಿಕಾರಿಗಳಿಗೆ ಘೇರಾವ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹಿರಿಯ ಮುಖಂಡ ವೈ.ಹೆಚ್. ಹುಚ್ಚಯ್ಯ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್ ಮತ್ತಿತರರು ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಟಿ.ಎಚ್. ಹನುಮಂತರಾಜು, ಉಪಾಧ್ಯಕ್ಷ ಎಚ್.ಎಂ. ರವೀಶಯ್ಯ, ನಾಗರತ್ನಮ್ಮ, ವಿಜಯಕುಮಾರ್, ಕಾರ‍್ಯದರ್ಶಿ ಕೆ. ವೇದಮೂರ್ತಿ, ಹೇಮಂತ್, ಗಿರೀಶ್, ವೈ.ಹೆಚ್. ರವಿಚಂದ್ರ, ಚೈತ್ರ ಮಂಜುನಾಥ್, ದಿಲೀಪ್, ಧನುಷ್, ವಿರೂಪಾಕ್ಷಪ್ಪ, ರಾಜಶೇಖರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.