ಹೊಸಪೇಟೆ: ವಿಜಯನಗರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ತಕ್ಷಣವೇ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಮಂಡಲ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಪಟೇಲ್ ನಗರದ ಬಿಜೆಪಿ ಕಚೇರಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ವಿಜಯನಗರ ಜಿಲ್ಲೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲೇ ಅತ್ಯಂತ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ವಿಜಯನಗರ ಮುಂಚೂಣಿಯಲ್ಲಿದೆ. ರಾಜ್ಯಾದ್ಯಂತ ಮಾನ್ಸೂನ್ ವೈಫಲ್ಯವಾಗಿದ್ದು, ರಾಜ್ಯಕ್ಕೆ ಶೇ. 41ರಷ್ಟು ಮಳೆ ಕೊರತೆ ಆಗಿದೆ. ಕೆಲವೆಡೆಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದೆ. ಮಳೆ ಕೊರತೆ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದರು.ಉತ್ತರ ಕರ್ನಾಟಕದಲ್ಲಿ ಮಳೆಯ ಕೊರತೆಯಿಂದಾಗಿ ಭೀಕರ ಬರಗಾಲದ ಉಂಟಾಗಿ 111 ತಾಲೂಕುಗಳು ಸುದೀರ್ಘ ಮಳೆಯಿಲ್ಲದ ಅವಧಿಯನ್ನು ಎದುರಿಸುತ್ತಿವೆ. ಈ ಪ್ರದೇಶಗಳಲ್ಲಿ ಬೆಳೆಗಳು ಒಣಗುತ್ತಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ತೀವ್ರ ಕೊರತೆ ಎದುರಾಗಿದೆ. ಉತ್ತರ ಕರ್ನಾಟಕ ಭಾಗ ಸಂಪೂರ್ಣವಾಗಿ ಮಳೆ ಅಧಾರಿತ ಕೃಷಿಯನ್ನು ಹೊಂದಿದೆ. ಅದರಲ್ಲೂ ವಿಜಯನಗರ ಜಿಲ್ಲೆಯಲ್ಲಿ ಶೇ. 40ಕ್ಕಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ಒಣಗಿವೆ. ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಜನಸಾಮಾನ್ಯರಿಗೆ ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಕಂಡುಬಂದಿದೆ. ಉದ್ಯೋಗ ಹುಡುಕಿ ರೈತರು ಹಾಗೂ ಕೂಲಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಸೇರಿದಂತೆ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಪ್ರತಿ ಎಕರೆಗೆ ₹20 ಸಾವಿರದಂತೆ ಪರಿಹಾರ ಘೋಷಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂದೀಪ್ ಸಿಂಗ್, ಕಸೆಟ್ಟಿ ಉಮಾಪತಿ, ಕೆ.ಎಸ್. ರಾಘವೇಂದ್ರ, ಕಿಚಿಡಿ ಕೊಟ್ರೇಶ್, ರೇವಣಸಿದ್ದಪ್ಪ, ಜಗದೀಶ್ ಕಮಟಗಿ, ಆರ್. ಕೊಟ್ರೇಶ್, ಪೂರ್ಣಿಮಾ, ಮಧುರ ಚನ್ನ ಶಾಸ್ತ್ರಿ, ನಟರಾಜ್, ಇಮ್ತಿಯಾಜ್, ಹೊನ್ನೂರಪ್ಪ, ಗೌಡಿ ಬಸವರಾಜ್, ನಾಗರಾಜ್, ರಾಘವೇಂದ್ರ, ರೇಣುಕಾ ಗವಿ, ವಿಜಯಲಕ್ಷ್ಮಿ, ಶೋಭಾ, ಗೌಸಿಯಾ, ಕೌಸರ್, ಕಮಲಮ್ಮ, ಜಯಶ್ರೀ ಸೇರಿದಂತೆ ಇತರರು ಭಾಗವಹಿದ್ದರು.