ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಿತ್ತೂರು ಪಟ್ಟಣ ಪಂಚಾಯತಿ ಸದಸ್ಯನ ಅಪಹರಣ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಸೆಪ್ಟೆಂಬರ್ 3ರಂದು ಕಿತ್ತೂರು ಪಟ್ಟಣ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಕಾಂಗ್ರೆಸ್ ಪಕ್ಷದ ಪುಂಡರು ಗುರುವಾರ ರಾತ್ರಿ ಹಲ್ಲೆ ನಡೆಸಿ ಅಪಹರಣ ಮಾಡಿದ್ದಾರೆ. ಅಧಿಕಾರದ ದುರಾಸೆಯಿಂದ ಕಾಂಗ್ರೆಸ್ ಪಕ್ಷ ಇಂತಹ ನೀಚ ಕೃತ್ಯ ಎಸಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಕೃತ್ಯಕ್ಕೆ ಸ್ಥಳೀಯ ಕಾಂಗ್ರೆಸ್ ಶಾಸಕರು ಕುಮಕ್ಕು ನೀಡಿದ್ದಾರೆ. ಘಟನೆಯ ಬಗ್ಗೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಕಿತ್ತೂರು ಶಾಸಕರು, ಕೃತ್ಯದಲ್ಲಿ ಪಾಲ್ಗೊಂಡ ಆರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಬಿಜೆಪಿ ನಾಯಕಿ ಲಕ್ಷ್ಮೀ ಇನಾಮದಾರ ಮಾತನಾಡಿ, ಈ ಘಟನೆ ಬಗ್ಗೆ ಸೂಕ್ತವಾದ ವಿಚಾರಣೆ ಆಗುವವರೆಗೆ ಹಾಗೂ ಅಪಹರಣಗೊಂಡ ಪಕ್ಷದ ಸದಸ್ಯ ಸುರಕ್ಷಿತವಾಗಿ ಮನೆಗೆ ಮರಳುವವರೆಗೆ ಚುನಾವಣೆ ಮುಂದೂಡಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಸಂದೀಪ ದೇಶಪಾಂಡೆ, ಧನಶ್ರೀ ದೇಸಾಯಿ, ಧನಂಜಯ ಜಾಧವ ಇತರರು ಪಾಲ್ಗೊಂಡಿದ್ದರು.ಕಿತ್ತೂರು ಪೊಲೀಸ್ ಠಾಣೆ ಎದುರು ಧರಣಿ
ಚನ್ನಮ್ಮನ ಕಿತ್ತೂರು: ಪಪಂ ಸದಸ್ಯ ನಾಗರಾಜ ಅಸುಂಡಿ ಅಪಹರಣ ಕುರಿತು ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಹಾಗೂ ಮಂಡಳ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ ನೇತೃತ್ವದಲ್ಲಿ ಕಿತ್ತೂರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದರು.ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಈ ಕೃತ್ಯ ಎಸಗಿದ್ದಾರೆ. ಅಪಹರಣಕ್ಕೆ ಒಳಗಾದ ನಾಗರಾಜ ಅಸುಂಡಿ ಕ್ಷೇಮವಾಗಿ ಮನೆಗೆ ಹಿಂದಿರುಗಬೇಕು. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಒತ್ತಾಯಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಧಿಕ್ಕಾರ ಕೂಗಿ ಕೆಲ ಕಾಲ ಧರಣಿ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸೈ ಪ್ರವೀಣ ಗಂಗೋಳ ಅವರ ಭರವಸೆ ಬಳಿಕ ಧರಣಿ ಕೈಬಿಡಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಬಿ.ಎಫ್. ಕೊಳದೂರ, ಉಳವಪ್ಪ ಉಳ್ಳೆಗಡ್ಡಿ, ಮಹಾಂತೇಶ ಗಿರನಟ್ಟಿ, ಸಕ್ಕರಗೌಡ ಪಾಟೀಲ, ಬಸವರಾಜ ಮಾತನವರ, ಸುಭಾಷ ರಾವಳ, ಶಿವಾನಂದ ಹನುಮಸಾಗರ, ಮಂಜುನಾಥ ಆಡಿಬಟ್ಟಿ ಸೇರಿ ಬಿಜೆಪಿ ಕಾರ್ಯಕರ್ತರು ಇದ್ದರು.ಸದಸ್ಯನ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಭೇಟಿ:
ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ ಅಸುಂಡಿ ಅಪಹರಣ ಹಿನ್ನೆಲೆ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಶುಕ್ರವಾರ ನಾಗರಾಜ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಲ್ಲಿ ಧೈರ್ಯ ತುಂಬಿದರು.ಈ ವೇಳೆ ಮಾತನಾಡಿದ ಅವರು, ಪ್ರಕರಣದ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವಿಷಯದ ಗಂಭೀರತೆ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಅಪಹರಣಕ್ಕೊಳಗಾದ ನಾಗರಾಜ ಸುರಕ್ಷಿತವಾಗಿ ವಾಪಸ್ ಬರಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಈ ಕುರಿತು ಕಾನೂನು ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ಕಿತ್ತೂರು ಮಂಡಳದ ವತಿಯಿಂದ ಅಧ್ಯಕ್ಷ ಬಸವರಾಜ ಪರವಣ್ಣವರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.