ನಿಗಮದ ಅಕ್ರಮ ಹಣ ವರ್ಗಾವಣೆಯ ನೈತಿಕ ಹೊಣೆ ಹೊತ್ತು ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ

ಬಳ್ಳಾರಿ: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಿಗಮದ ಅಕ್ರಮ ಹಣ ವರ್ಗಾವಣೆಯ ನೈತಿಕ ಹೊಣೆ ಹೊತ್ತು ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಬರೀ ಸಚಿವರೊಬ್ಬರೇ ರಾಜೀನಾಮೆ ನೀಡಿದರೆ ಸಾಲದು, ಹಣಕಾಸು ಸಚಿವ ಸ್ಥಾನವನ್ನು ನಿರ್ವಹಿಸುತ್ತಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ. ತಳ ಸಮುದಾಯದ ಕಲ್ಯಾಣಕ್ಕೆಂದು ಮೀಸಲಾಗಿಟ್ಟಿದ್ದ ನೂರಾರು ಕೋಟಿ ರುಪಾಯಿ ಅಕ್ರಮವಾಗಿ ಹೊರ ರಾಜ್ಯಗಳಿಗೆ ವರ್ಗಾಯಿಸಲಾಗಿದೆ. ಈ ಎಲ್ಲವೂ ಹಣಕಾಸು ಇಲಾಖೆಯ ಗಮನಕ್ಕೆ ಬರದೇ ನಡೆಯುವುದಿಲ್ಲ. ಈ ಎಲ್ಲವೂ ಗೊತ್ತಿದ್ದೂ ಸಿಎಂ ಅಕ್ರಮ ತಡೆಯಲು ಏಕೆ ಕ್ರಮ ವಹಿಸಲಿಲ್ಲ ಎಂದು ಪ್ರಶ್ನಿಸಿದರು.

ಶೋಷಿತ ಸಮುದಾಯದ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಸರ್ಕಾರ, ಅದೇ ಸಮಾಜಕ್ಕೆ ಬಹುದೊಡ್ಡ ಅನ್ಯಾಯ ಮಾಡಲು ಆಸ್ಪದ ಮಾಡಿಕೊಟ್ಟಿದೆ. ಸಿಎಂ ಕೂಡಲೇ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಮೆರವಣಿಗೆ ಹೊರಟ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಡಬಲ್ ರಸ್ತೆಯ ಮೂಲಕ ಗಡಗಿಚನ್ನಪ್ಪ ವೃತ್ತದಲ್ಲಿ ಜಮಾಯಿಸಿದರು. ಅಲ್ಲಿಂದ ತೆರಳಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ವೃತ್ತದಲ್ಲಿ ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು, ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡುವ ಮೂಲಕ ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಸಮುದಾಯದ ಅಭಿವೃದ್ಧಿ ನೆಲೆಯಲ್ಲಿ ಬಿಡುಗಡೆಯಾದ ಹಣ ದುರ್ಬಳಕೆಯಾಗಿದೆ. ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ವೇಳೆ ಬರೆದ ಡೆತ್ ನೋಟ್‌ನಲ್ಲಿ ಬಿ.ನಾಗೇಂದ್ರ ಮೌಖಿಕ ಆದೇಶದಂತೆ ಹಣ ವರ್ಗಾಯಿಸಲಾಗಿದೆ ಎಂದು ಬರೆದಿದ್ದರೂ ಈವರೆಗೆ ಯಾವುದೇ ತನಿಖೆಗೆ ಒಳಪಡಿಸಲಾಗಿಲ್ಲ. ಎಸ್ಟಿ ಸಮುದಾಯಕ್ಕೆ ಇಷ್ಟೆಲ್ಲ ಅನ್ಯಾಯವಾಗಿದ್ದರೂ ಇದೇ ಸಮುದಾಯದ ಶಾಸಕರು ಈವರೆಗೆ ಧ್ವನಿ ಎತ್ತದಿರುವುದು ಸಮಾಜಕ್ಕೆ ಮಾಡಿದ ದ್ರೋಹ. ಪ್ರಕರಣದ ಮುಖ್ಯ ರೂವಾರಿ ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಸಿಎಂ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಪ ಸದಸ್ಯ ವೈ.ಎಂ. ಸತೀಶ್, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಪಕ್ಷದ ಮುಖಂಡರಾದ ಎಸ್.ಗುರುಲಿಂಗನಗೌಡ, ಮುರಹರಗೌಡ ಗೋನಾಳ್, ಕೆ.ಎಸ್. ದಿವಾಕರ್, ಶ್ರೀನಿವಾಸ ಮೋತ್ಕರ್, ಎಚ್‌.ಹನುಮಂತಪ್ಪ, ಸುರೇಖಾ ಮಲ್ಲನಗೌಡ, ಪಾಲಣ್ಣ, ಮಲ್ಲೇಶ್‌ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸುಮಾರು ಎರಡು ತಾಸು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.