ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಹಾಗೂ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ತಾತ್ಕಾಲಿಕವಾಗಿ ಹಾಕಲಾಗಿದ್ದ ಶಾಮಿಯಾನದಡಿಯಲ್ಲಿ ಕುಳಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.ನಂತರ ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸಂವಿಧಾನ, ದಲಿತರು, ಮಹಿಳೆಯರು, ರೈತ ವಿರೋಧಿಯಾಗಿದೆ. ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದ ಜನರಿಗೆ ಅನ್ಯಾಯ ಮಾಡಿದೆ. ಈ ಸರ್ಕಾರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ರಾಜ್ಯ ಸರ್ಕಾರದ ಅಭಿವೃದ್ದಿಯೇ ಶೂನ್ಯ, ಅನೇಕ ಹಗರಣ ಮಾಡಿದ್ದೀರಿ, ಜನತೆಗೆ ಮೋಸ ಮಾಡಿದ್ದೀರಿ, ವಾಲ್ಮೀಕಿ ಇಲಾಖೆಯ ₹187ಕೋಟಿ ಹಣವನ್ನು ನುಂಗಿ ಆ ಸಮುದಾಯಕ್ಕೆ ಅನ್ಯಾಯ ಮಾಡಿದ್ದೀರಿ ನಿಮಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರೆ ಸಾಲದು ಆ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಕೂಡ ರಾಜೀನಾಮೆ ಕೊಡಬೇಕಾಗಿತ್ತು. ಈಗ ಮುಡಾ ಹಗರದಲ್ಲಿ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ತನಿಖೆ ಎದುರಿಸಲಿ:ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಮುಡಾ ಹಗರಣ ಸಂಬಂಧಪಟ್ಟಂತೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಅವರೇನು ದೇವ್ರೆ ? ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.ಮುಡಾದಲ್ಲಿ 3 ಎಕರೆ 16 ಗುಂಟೆ ಜಮೀನು ಆದಿಕರ್ನಾಟಕ ಸಮುದಾಯಕ್ಕೆ ಸೇರಿದ್ದು, ಬೇರೆಬೇರೆ ರೀತಿಯಲ್ಲಿ ಕಾನೂನು ದುರುಪಯೋಗ ಪಡಿಸಿಕೊಂಡು ನಿವೇಶನ ಪಡೆದಿದ್ದೀರಿ. ನಾನು ದಲಿತ ಪರ ಎನ್ನುವ ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಇದ್ದರೆ ದಲಿತರಿಗೆ ಜಮೀನು ವಾಪಸ್ ಕೊಡಲಿ ಎಂದರು. ಕಾಂಗ್ರೆಸ್ ಎಂಎಲ್ ಸಿ ಐವನ್ ಡಿಸೋಜ ರಾಜಭವನಕ್ಕೆ ನುಗ್ಗಿ ರಾಜ್ಯಪಾಲನ್ನು ಓಡಿಸಿ ಬಿಡುತ್ತೇವೆ ಎಂದು ಕ್ರಾಂತಿಕಾರಿ ಹೇಳಿಕೆಯನ್ನು ಗೃಹ ಸಚಿವರು ಕೂಡ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಗೃಹ ಸಚಿವರ ಖಾಕಿಪಡೆಗಳು ಸುಮೋಟೊ ಕೇಸ್ ದಾಖಲಿಸಿ ಡಿಸೋಜರನ್ನು ಬಂಧಿಸಬೇಕಿತ್ತು. ಜಿ.ಪರಮೇಶ್ವರ ನಿಜವಾಗಲೂ ಗೃಹ ಸಚಿವರೇ ಆಗಿದ್ದರೆ ಐವನ್ ಡಿಸೋಜರನ್ನು ಬಂಧಿಸಲಿ ಹಾಗೆಯೇ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ರಕ್ತಕ್ರಾಂತಿ ಆಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ ಅವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಬೇಕು. ಅಲ್ಲದೆ ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲ ರನ್ನು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಎಲ್ಲ ಮಂತ್ರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆ ಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜು, ಜಿಲ್ಲಾ ಉಪಾಧ್ಯಕ್ಷ ಮಂಗಲ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್ ಹೊನ್ನೂರು ಮಹದೇವ ಸ್ವಾಮಿ, ಮಾಜಿ ಅಧ್ಯಕ್ಷ ಆರ್.ಸುಂದರ್, ನಿಜದನಿ ವೆಂಕಟೇಶ್, ಸರಸ್ವತಮ್ಮ. ಸುದರ್ಶನ್ ಗೌಡ. ನಟರಾಜೇಗೌಡ, ಕೂಡ್ಲೂರು ಶ್ರೀಧರಮೂರ್ತಿ, ಮಲ್ಲೇಶ್ ನಾಯಕ, ಎಸ್ ಸಿ ಮೋರ್ಚಾದ ಅಧ್ಯಕ್ಷ ಮೂಡಹಳ್ಳಿ ಮೂರ್ತಿ, ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ, ಮಹಿಳಾ ಮೋರ್ಚಾದ ಅಧ್ಯಕ್ಷೆ ಕಮಲಮ್ಮ, ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಜಯಸುಂದರ, ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ನಗರ ಮಂಡಲ ಅಧ್ಯಕ್ಷ ಶಿವರಾಜು, ಗ್ರಾಮಾಂತರ ಮಂಡಲ ಅಧ್ಯಕ್ಷ ಮಹೇಶ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಸವಣ್ಣ, ನಟರಾಜು, ಸೂರ್ಯ, ಬಂಗಾರನಾಯಕ, ವಿರೇಂದ್ರ, ಮಂಜುನಾಥ, ಮುತ್ತಿಗೆ ಮೂರ್ತಿ ಆನಂದ ಭಗೀರಥ, ಮಹದೇವಪ್ರಸಾದ್ ಇತರರು ಭಾಗವಹಿಸಿದ್ದರು.