ಹಾಲಿನ ಸಬ್ಸಿಡಿ ಬಿಡುಗಡೆಗೆ ಆಗ್ರಹಿಸಿ ಹಾಸನದಲ್ಲಿ ಬಿಜೆಪಿ ಪ್ರತಿಭಟನೆ

| Published : Feb 07 2024, 01:48 AM IST

ಸಾರಾಂಶ

ರೈತರಿಗೆ ನೀಡಬೇಕಾದ ಪ್ರತಿ ಲೀಟರ್‌ಗೆ 5 ರು. ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರವು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಿ ಹಾಸನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರ ಧರಣಿ । ಜಿಲ್ಲಾಡಳಿತಕ್ಕೆ ಮನವಿ । ಕೂಡಲೇ ಪ್ರೋತ್ಸಾಹಧನ ಬಿಡುಗಡೆಗೆ ಒತ್ತಾಯ

ಕನ್ನಡಪ್ರಭ ವಾರ್ತೆ ಹಾಸನ

ರೈತರಿಗೆ ನೀಡಬೇಕಾದ ಪ್ರತಿ ಲೀಟರ್‌ಗೆ 5 ರು. ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರವು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಮುಖಂಡರಾದ ನಾರಾಯಣಗೌಡ ಮತ್ತು ಕಿರಣ್ ಮಾಧ್ಯಮದೊಂದಿಗೆ ಮಾತನಾಡಿ, ‘ಅಧಿಕಾರಕ್ಕೇರಬೇಕು ಎನ್ನುವ ಏಕೈಕ ಕಾರಣಕ್ಕೆ, ಜನತೆಯ ಕಿವಿ ಮೇಲೆ ಬಣ್ಣ ಬಣ್ಣದ ಹೂವಿಟ್ಟು, ನಂದಿನಿ ವಿಚಾರದಲ್ಲಿ ಇಲ್ಲಸಲ್ಲದ ವಿವಾದ ಹುಟ್ಟಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ತಾವು ಯಾವ ಆಶ್ವಾಸನೆ ನೀಡಿದ್ದೆವು ಎಂಬುದೇ ಮರೆತಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನುಡಿದಂತೆ ನಡೆದ ಸರ್ಕಾರ ಎಂದು ಮಣಗಟ್ಟಲೆ ಜಾಹೀರಾತು ನೀಡುವ ಮುನ್ನ ಹಾಲು ಉತ್ಪಾದಕರಿಗೆ ೭ ರು. ಸಬ್ಸಿಡಿಯನ್ನು ಎಲ್ಲಿ ಯಾವಾಗ ನೀಡಲಾಗಿದೆ ಎಂಬುದನ್ನು ಜನತೆಗೆ ತಿಳಿಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಜನತೆಗೆ ಮಾತ್ರವಲ್ಲ, ಜಾನುವಾರಿಗೂ ಶಾಕ್ ನೀಡುವ ಸರ್ಕಾರ. ಹಾಲು ಉತ್ಪಾದಕರಿಗೆ ಸಬ್ಸಿಡಿ ಹೆಚ್ಚಳ, ಹಸು-ಎಮ್ಮೆ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇತರೆ ಬಣ್ಣ ಬಣ್ಣದ ಹೂವುಗಳನ್ನು ಕಿವಿ ಮೇಲೆ ಇಟ್ಟು ಅಧಿಕಾರಕ್ಕೆ ಬಂದು, ಈಗ ಸಾಲವನ್ನು ನೀಡುತ್ತಿಲ್ಲ. ಸಬ್ಸಿಡಿಯನ್ನು ಹೆಚ್ಚಿಸದೆ, ೭೧೬ ಕೋಟಿ ರು. ಸಬ್ಸಿಡಿ ಬಾಕಿ ಉಳಿಸಿಕೊಂಡಿದೆ. ಇದರ ಪರಿಣಾಮ ರಾಜ್ಯದಲ್ಲಿ ಹಾಲಿನ ಉತ್ಪಾದನೆ ದಯನೀಯವಾಗಿ ಕುಂಠಿತವಾಗಿದೆ’ ಎಂದು ದೂರಿದರು.

ಜನತೆಯ ಜತೆ ಜಾನುವಾರು ಶಾಪವೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ತಟ್ಟುವುದು ಖಚಿತ, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಹೈನುಗಾರರು ಹೈರಾಣಾಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಗೆ 5 ರುಪಾಯಿ ಪ್ರೋತ್ಸಾಹ ಧನ ನೀಡಿದ್ದರ ಫಲವಾಗಿ ಬಿಜೆಪಿ ಆಡಳಿತದಲ್ಲಿ ಪ್ರತಿ ನಿತ್ಯ ೮೦ ರಿಂದ ೮೫ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಅದರ ಫಲವಾಗಿ ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿ, ಪ್ರತಿದಿನ ೮೫ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಹೈನುಗಾರರಿಗೆ ನೀಡಬೇಕಾಗಿದ್ದ ೭೧೬ ಕೋಟಿ ರು. ಪ್ರೋತ್ಸಾಹಧನ ನೀಡದೇ ಇರುವುದರ ಪರಿಣಾಮ ರಾಜ್ಯದಲ್ಲಿ ಇಂದು ಹಾಲಿನ ಉತ್ಪಾದನೆಯಲ್ಲಿ ಕುಂಠಿತವಾಗಿ ೧೦ ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹಣೆ ಕಡಿಮೆ ಆಗಿದೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ಬಾಕಿ ಉಳಿಸಿದ ಹೈನುಗಾರರ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೇರಿದ ದಿನದಿಂದ ಇಲ್ಲಿಯವರೆಗೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿಲ್ಲ. ಹಾಲು ಉತ್ಪಾದಕರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಿಲ್ಲ. ಇದಕ್ಕೂ ಕೇಂದ್ರ ಸರ್ಕಾರಕ್ಕೂ ಯಾವ ಸಂಬಂಧ? ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದಕರಿಗೆ ೭೧೬ ಕೋಟಿ ರು. ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಈ ಸರ್ಕಾರ ರೈತರಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಸದಸ್ಯ ಶಂಕರ್, ರಾಕೇಶ್, ಶ್ರೀಕಾಂತ್, ದಿನೇಶ್ ಇದ್ದರು.ಹಾಲು ಉತ್ಪಾದಕರಿಗೆ 5 ರು. ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.