ಸಾರಾಂಶ
ಸಂವಿಧಾನ ಬಾಹಿರ ನಿರ್ಧಾರ ಹಿಂಪಡೆಯಲು ಒತ್ತಾಯಕನ್ನಡಪ್ರಭ ವಾರ್ತೆ ಹೊಸಪೇಟೆ
ಬಿಜೆಪಿಯ 18 ಶಾಸಕರನ್ನು ವಿಧಾನಸಭೆ ಸಭಾಧ್ಯಕ್ಷರು ಆರು ತಿಂಗಳ ಕಾಲ ಅಮಾನತು ಮಾಡಿರುವುದನ್ನು ಖಂಡಿಸಿ ವಿಜಯನಗರ ಜಿಲ್ಲಾ ಬಿಜೆಪಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.ನಗರದ ಪಟೇಲ್‌ನಗರದಿಂದ ತಹಸೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಶೃತಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ ಮಾತನಾಡಿ, ವಿಧಾನಸಭಾ ಸ್ಪೀಕರ್ ನಿಲುವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಅಸಂವಿಧಾನಾತ್ಮಕ, ಏಕಪಕ್ಷೀಯ ನಿಲುವು ತಳೆಯಲಾಗಿದೆ. ಮನಸೋಇಚ್ಛೆಯಿಂದ ತೆಗೆದುಕೊಂಡ ತೀರ್ಮಾನ ಆಗಿದ್ದು, ಜನರಿಂದ ಆಯ್ಕೆಯಾದ ಶಾಸಕರಿಗೆ ಮತ್ತು ಆಯಾ ಕ್ಷೇತ್ರದ ಮತದಾರರಿಗೂ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಸಕರ ಸಂವಿಧಾನದತ್ತ ಹಕ್ಕನ್ನು ಕಿತ್ತುಕೊಳ್ಳುವಂತಹ ಸಂವಿಧಾನ ಬಾಹಿರ ನಿರ್ಧಾರ ತೆಗೆದುಕೊಂಡ ವಿಧಾನಸಭಾ ಸ್ಪೀಕರ ಯು.ಟಿ. ಖಾದರ್ ಅವರು ತಮ್ಮ ನಿರ್ಧಾರ ಹಿಂಪಡೆಯಬೇಕು. ವಿಧಾನಸಭಾಧ್ಯಕ್ಷರು ತಮ್ಮ ತೀರ್ಮಾನವನ್ನು ಮರು ಪರಿಶೀಲಿಸಿ, ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮತ್ತೊಮ್ಮೆ ತುಷ್ಟೀಕರಣದ ತನ್ನ ಹಳೇ ಚಾಳಿಯನ್ನು ಮುಂದುವರೆಸಿದೆ. ಸರ್ಕಾರಿ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ಮುಸ್ಲಿಮರಿಗೆ ನೀಡಿರುವುದು ಸರಿಯಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಸರಿಯಲ್ಲ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಕೈಬಿಡಬೇಕು. ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಕೊಡಲು ಅವಕಾಶ ಇಲ್ಲ. ಕೂಡಲೇ ಕಾಂಗ್ರೆಸ್ ಈ ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.ಮಾಜಿ ಎಂಎಲ್ಸಿ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ್ ಜೀರೆ, ಭರಮಲಿಂಗನಗೌಡ, ಕೆ.ಎಸ್. ರಾಘವೇಂದ್ರ, ಕಿಚಿಡಿ ಕೊಟ್ರೇಶ್, ಅರುಂಡಿ ಸುವರ್ಣಮ್ಮ, ಈ.ಟಿ. ಲಿಂಗರಾಜ, ರೇವಣ್ಣ, ಜಗದೀಶ್ ಕಮಟಗಿ, ಶಂಕರಮೇಟಿ, ಬೆಣಕಲ್ ಪ್ರಕಾಶ, ಜೀವರತ್ನಂ, ಕಾಸಟ್ಟಿ ಉಮಾಪತಿ, ರೇವಣಸಿದ್ದಪ್ಪ, ಅನುರಾಧ, ಮಧುರಚನ್ನಶಾಸ್ತ್ರಿ ಮತ್ತಿತರರಿದ್ದರು.