ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗುತ್ತಿದೆ

ಕಂಪ್ಲಿ: ನಿತ್ಯಬಳಕೆಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ ಹೇರಬೇಕು ಹಾಗೂ ತುಂಗಭದ್ರಾ ಎಲ್‌ಎಲ್ ಮತ್ತು ಎಚ್‌ಎಲ್ ಕಾಲುವೆಗಳಿಗೆ ಡಿಸೆಂಬರ್ ತಿಂಗಳವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಂಪ್ಲಿ ಮಂಡಲದಿಂದ ಗುರುವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗುತ್ತಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ ಮಾತನಾಡಿ, ದಿನನಿತ್ಯ ಬಳಕೆಯಾಗುವ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದರಿಂದ ಬಡವರು, ಮಧ್ಯಮ ವರ್ಗದವರು ಹಾಗೂ ಕೂಲಿ ಕಾರ್ಮಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲ ಕಲ್ಪಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಅಗತ್ಯ ಸೇವೆ ಒದಗಿಸುವ ವ್ಯವಸ್ಥೆ ಮಾಡಬೇಕು. ರೈತರ ಕೃಷಿ ಚಟುವಟಿಕೆಗಳಿಗೆ ಪೂರಕ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಅಳ್ಳಳ್ಳಿ ವೀರೇಶ್ ಮಾತನಾಡಿ, ತುಂಗಭದ್ರಾ ಎಲ್‌ಎಲ್ ಮತ್ತು ಎಚ್‌ಎಲ್ ಕಾಲುವೆಗಳಿಗೆ ಡಿಸೆಂಬರ್ ತಿಂಗಳವರೆಗೆ ನೀರು ಹರಿಸುವುದು ಅತ್ಯಗತ್ಯವಾಗಿದೆ. ಕಾಲುವೆ ನೀರಿನ ಮೇಲೆ ಅವಲಂಬಿತವಾಗಿರುವ ರೈತರ ಬೆಳೆಗಳಿಗೆ ಸಮರ್ಪಕ ನೀರು ದೊರೆಯದಿದ್ದರೆ ಕೃಷಿ ಉತ್ಪಾದನೆ ಕುಂಠಿತವಾಗುವುದರ ಜತೆಗೆ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ನೀರು ಹರಿಸುವ ಅವಧಿಯನ್ನು ವಿಸ್ತರಿಸಿ ಕೊನೆಯ ಹಂತದ ಬೆಳೆಗಳಿಗೂ ಸಮರ್ಪಕ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ಕ್ಷೇತ್ರದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾನವ ಸರಪಳಿ ರಚಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು. ಪ್ರತಿಭಟನೆಯ ನಂತರ ಪ್ರಭಾರಿ ಉಪ ತಹಸೀಲ್ದಾರ್ ಎಸ್.ಡಿ.ರಮೇಶ್ ಅವರಿಗೆ ವಿವಿಧ ಬೇಡಿಕೆ ಒಳಗೊಂಡ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಅಗಳಿ ಪಂಪಾಪತಿ, ಎಸ್.ಎಂ. ನಾಗರಾಜ, ರಾಘವೇಂದ್ರ ತಳವಾರ, ಪ್ರಶಾಂತ್, ಸಿ.ಎ. ಚನ್ನಪ್ಪ, ಎನ್.ರಾಮಾಂಜನೇಯಲು, ಫಕ್ಕೀರಪ್ಪ, ಕಡೇಮನಿ ನಾಗರಾಜ, ಬಿ. ದೇವೇಂದ್ರ, ಜಂಗಾ ನಾಗರಾಜ, ಎಸ್. ಚಂದ್ರಶೇಖರಗೌಡ, ಉಳ್ಳಾಗಡ್ಡಿ ಅರುಣ್‌ಕುಮಾರ್, ಟಿ.ವಿ. ಸುದರ್ಶನರೆಡ್ಡಿ, ವೈ.ಮುರುಳಿಮೋಹನರೆಡ್ಡಿ, ಹೂವಣ್ಣ, ಕರಿಬಸವನಗೌಡ, ಕೆ.ರಂಗಪ್ಪ, ಬೂದವಾಳ ಮಂಜುಳ, ಗುರು, ಸೋಮಶೇಖರ, ದೇವಲಾಪುರ ರವಿ, ರಾಜು ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.