ಸಾರಾಂಶ
- ಪರಿಶಿಷ್ಟರು, ಹಿಂದುಳಿದ ವರ್ಗಗಳ ವಿರೋಧಿ ರಾಹುಲ್ ಗಾಂಧಿ: ಶ್ರೀನಿವಾಸ ದಾಸಕರಿಯಪ್ಪ ಆರೋಪ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಅಮೇರಿಕಾದ ಜಾರ್ಜ್ ಟೌನ್ ವಿಶ್ವ ವಿದ್ಯಾನಿಲಯದಲ್ಲಿ ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಮೀಸಲಾತಿ ರದ್ದುಪಡಿಸುವುದಾಗಿ ನೀಡಿರುವ ಹೇಳಿಕೆ ಖಂಡಿಸಿ ಸೆ.14ರಂದು ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾ ಉಪಾಧ್ಯಕ್ಷ, ಯುವ ಮುಖಂಡ ಟಿ.ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಬಳಿಕ, ಪ್ರತಿಭಟನಾ ಮೆರವಣಿಗೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಅರ್ಪಿಸಲಾಗುವುದು ಎಂದರು.ಕಾಂಗ್ರೆಸ್ ಸರ್ಕಾರಗಳೆಲ್ಲ ಅಸಡ್ಡೆ:
ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿ ವಿರೋಧಿ ನಡೆಯನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಸದಾ ಎಸ್ಸಿ-ಎಸ್ಟಿ- ಒಬಿಸಿ ಮೀಸಲಾತಿಯ ವಿರುದ್ಧವೇ ಇದೆ. ಮೀಸಲಾತಿ ಎಂಬುದು ದಲಿತರು, ಅವಕಾಶ ವಂಚಿತರ ಹಕ್ಕು. ಅದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಬಿಜೆಪಿ ಅವಕಾಶವನ್ನೂ ನೀಡುವುದಿಲ್ಲ. 7 ದಶಕದಿಂದಲೂ ಕಾಂಗ್ರೆಸ್ ಪಕ್ಷವು ದಲಿತರು, ಶೋಷಿತರ ಮೂಗಿಗೆ ತುಪ್ಪ ಸವರುವ ಕೆಲಸವನ್ನೇ ಮಾಡಿಕೊಂಡು ಬಂದಿದೆ. ಅಧಿಕಾರದಲ್ಲಿ ದ್ದಾಗ ದಲಿತರ ಶ್ರೇಯೋಭಿವೃದ್ಧಿಗೆ ಸಮಗ್ರ ನೀತಿ ರೂಪಿಸುವಲ್ಲೂ ಅಸಡ್ಡೆ ತೋರಿದೆ ಎಂದು ದೂರಿದರು.ಮೀಸಲಾತಿಗೆ ತಿಲಾಂಜಲಿ:
ದಲಿತರು, ಶೋಷಿತರು, ಹಿಂದುಳಿದ ವರ್ಗಗಳನ್ನು ಕೇವಲ ಮತ ಬ್ಯಾಂಕ್ ರೂಪದಲ್ಲೇ ಕಾಂಗ್ರೆಸ್ ಕಾಣುತ್ತಾ ಬಂದ ಪಕ್ಷವಾಗಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರನ್ನೇ ಎರಡು ಸಲ ಚುನಾವಣೆಯಲ್ಲಿ ಸೋಲಿಸಿದ ಪಕ್ಷವಾಗಿದೆ. ಬಾಬಾ ಸಾಹೇಬರಿಗೆ ಕಾಂಗ್ರೆಸ್ ತೀವ್ರ ಅನ್ಯಾಯ, ಅವಮಾವನ್ನೇ ಮಾಡಿದೆ. ಇದೀಗ ಅಮೇರಿಕಾದಲ್ಲಿ ರಾಹುಲ್ ಗಾಂಧಿ ಭಾರತದಲ್ಲಿ ಮೀಸಲಾತಿ ರದ್ಧುಪಡಿಸುವ ಹೇಳಿಕೆ ನೀಡುವ ಮೂಲಕ ಮೀಸಲಾತಿಗೆ ತಿಲಾಂಜಲಿ ಇಡಲು ಹೊರಟಿದ್ದಾರೆ ಎಂದು ದೂರಿದರು.ಕಾಕಾ ಕಾಲೇಲ್ಕರ್ ಹಾಗೂ ಡಿ.ಪಿ.ಮಂಡಲ್ ಸಮಿತಿ ವರದಿಗಳನ್ನು ಕಸದ ಬುಟ್ಟಿಗೆ ಎಸೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರಗಳು ಮಾಡಿದ್ದವು. ಸ್ವತಃ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮೀಸಲಾತಿ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು. ವಿದೇಶಿ ತಾಯಿಯ ಮಗನಾದ ರಾಹುಲ್ ಗಾಂಧಿ ತಾನು ಭಾರತೀಯ ಅಲ್ಲ ಅಂತಾ ಅಂದುಕೊಂಡಿರಬೇಕು. ಹಾಗಾಗಿಯೇ, ವಿದೇಶದಲ್ಲಿ ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆ ವೇಳೆ ದಲಿತರು, ಮೀಸಲಾತಿ ಹಾಗೂ ಸಂವಿಧಾನದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕೆಲಸವನ್ನು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರು ಮಾಡುತ್ತಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್.ಸಿ- ಎಸ್‌ಟಿ ಸಮುದಾಯಗಳಿಗೆ ಸೇರಿದ ₹25 ಸಾವಿರ ಕೋಟಿ ಹಣವನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದೂ ಸಹ ಪರಿಶಿಷ್ಟ ಜಾತಿ-ಪಂಗಡಗಳ ಜನರಿಗೆ ಮಾಡಿರುವ ಘೋರ ಅನ್ಯಾಯ. ಇಂಥವರ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಹೋರಾಟಕ್ಕೆ ಸಜ್ಜಾಗಿದೆ ಎಂದು ಶ್ರೀನಿವಾಸ ದಾಸಕರಿಯಪ್ಪ ತಿಳಿಸಿದರು.ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ಮೀಸಲಾತಿ ರದ್ದುಪಡಿಸುವ ರಾಹುಲ್ ಗಾಂಧಿ ಹೇಳಿಕೆ ಖಂಡನೀಯ. ಇಂತಹ ಹೇಳಿಕೆಯಿಂದ ದಲಿತರಿಗೆ ತೀವ್ರ ನೋವಾಗಿದೆ. ತಕ್ಷಣವೇ ರಾಹುಲ್ ಗಾಂಧಿ ದೇಶದ ಎಸ್ಸಿ-ಎಸ್ಟಿ ಸಮುದಾಯಗಳ ಜನರ ಕ್ಷಮೆ ಕೇಳಬೇಕು. ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದುಪಡಿಸುವಂತೆ ರಾಷ್ಟ್ರಪತಿಗೆ ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಕೆ.ಎಸ್.ಕೃಷ್ಣಕುಮಾರ, ಮಂಜಾನಾಯ್ಕ, ಜಿ.ವಿ.ಗಂಗಾಧರ, ಶಿವಕುಮಾರ, ಸುರೇಶ, ದೊಡ್ಡೇಶ, ರಮೇಶ ಇತರರು ಇದ್ದರು.- - -
ಬಾಕ್ಸ್ * * ರಾಗಾರಿಂದ ಭಾರತಕ್ಕೆ ಮಾನ ಹಾನಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ ಹಣವನ್ನು ಬಳ್ಳಾರಿ ಚುನಾವಣೆಗೆ ಕಾಂಗ್ರೆಸ್ಸಿನ ಸಚಿವರು, ನಾಯಕರು ಬಳಸಿದ್ದಾರೆ. ₹187 ಕೋಟಿ ಲೂಟಿ ಮಾಡಿದ್ದು, ಪ್ರಕರಣದ ಪಾತ್ರದಾರಿಗಳಲ್ಲಿ ಒಬ್ಬರಾದ ದದ್ದಲ್ ಹೆಸರೇ ಆರೋಪ ಪಟ್ಟಿಯಲ್ಲಿಲ್ಲ. ಇದು ಕೇವಲ ವಾಲ್ಮೀಕಿ ನಿಗಮದ ಹಗರಣದ ವಿಚಾರ. ಇನ್ನೂ ಕಾಂಗ್ರೆಸ್ ಸರ್ಕಾರದಲ್ಲಿ ನಿವೇಶನ ಸೇರಿದಂತೆ ಸಾಕಷ್ಟು ಭ್ರಷ್ಟಾಚಾರ, ಹಗರಣ ಆಗಿವೆ. ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲಾ ಭಾರತದ ಮಾನ ಹಾನಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂಥವರನ್ನು ಲೋಕಸಭಾ ಸದಸ್ಯತ್ವದಿಂದಲೇ ಅನರ್ಹಗೊಳಿಸಬೇಕು ಎಂದು ಟಿ.ಶ್ರೀನಿವಾಸ ದಾಸಕರಿಯಪ್ಪ ಹೇಳೀದರು.- - --13ಕೆಡಿವಿಜಿ3:
ದಾವಣಗೆರೆಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.