ಧಾರವಾಡ:
ಅವಳಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ತೀರಾ ಹದಗೆಡುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ, ಆತಂಕ ಹಾಗೂ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ತಡಸಿನಕೊಪ್ಪ ಬಳಿ ಜಮೀನು ವಿವಾದದ ಹಿನ್ನೆಲೆ ನಡೆದ ಫೈರಿಂಗ್ ಘಟನೆಯೇ ಪ್ರಮುಖ ಸಾಕ್ಷಿಯಾಗಿದ್ದು, ಪೊಲೀಸ್ ಆಯುಕ್ತರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಬಿಜೆಪಿ 71 ಹಾಗೂ 74ನೇ ಯುವ ಮೋರ್ಚಾ ಘಟಕಗಳ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ಮುಖಂಡರು, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಪರಾಧ ಚಟುವಟಿಕೆಗಳು ದಿನೇದಿನೇ ಹೆಚ್ಚುತ್ತಿವೆ ಎಂದು ಆರೋಪಿಸಿದರು.
ತಡಸಿನಕೊಪ್ಪ ಫೈರಿಂಗ್ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಹಾಗೂ ವಿವಾದಾತ್ಮಕವಾಗಿ ನಡೆದುಕೊಂಡ ಪೊಲೀಸ್ ಅಧಿಕಾರಿ ಶಶಿಕುಮಾರ್ ಅವರನ್ನು ತಕ್ಷಣ ಅಮಾನತು ಮಾಡಿ ಅವರ ವಿರುದ್ಧ ಇಲಾಖಾ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.ಮಾಜಿ ಮೇಯರ್ ಈರೇಶ ಅಂಚಟಗೇರಿ ನೇತೃತ್ವ ವಹಿಸಿ, ರಾಜ್ಯ ಸರ್ಕಾರದ ವೈಫಲ್ಯದಿಂದ ಅವಳಿನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಭಯಭೀತ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಆರೋಪಿಸಿದರು.
ರೈತ ಮುಖಂಡ ಮಾರುತಿ ಹಿಂಡಸಗೇರಿ, ಸಂಜಯ ಕಪಾಟಕರ, ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ಸುರೇಶ ಬೇದರೆ, ಶಕ್ತಿ ಹಿರೇಮಠ, ಮಂಜು ಹೆಬಸೂರ, ಪ್ರಮೋದ್, ಪ್ರಣೀತ್ ರಾಮನಗೌಡರ ಮತ್ತಿತರರು ಇದ್ದರು.