ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬೆಂಗಳೂರು ನಗರ ಬಿಜೆಪಿ ಘಟಕದಿಂದ ಮಂಗಳವಾರ ನಗರದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಲಾಯಿತು.ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾಯಿಸಿದ್ದ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಕೆಲ ಶಾಸಕರು, ಸಂಸದರು ಹಾಗೂ ಮುಖಂಡರು ಖಾಲಿ ಕೊಡಗಳನ್ನು ಪ್ರದರ್ಶಿಸಿದರು. ಮಹಿಳಾ ಕಾರ್ಯಕರ್ತೆಯರು ಕುದುರೆ ಗಾಡಿಯ ಮೇಲೆ ಖಾಲಿ ಟ್ಯಾಂಕ್, ಅದರ ಮೇಲೆ ಖಾಲಿ ಕೊಡ ಇರಿಸಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ‘ನೀರಿಲ್ಲ ನೀರಿಲ್ಲ, ಸರ್ಕಾರದ ಬಳಿ ಹಣ ಇಲ್ಲ, ಎಲ್ಲವೂ ಪಾಪರ್’ ಎಂದು ಘೋಷಣೆ ಕೂಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಬರಗಾಲ ಆವರಿಸಿದೆ. ಕುಡಿಯಲು ನೀರಿಲ್ಲದೆ ಜನರು ಗುಳೇ ಹೋಗುತ್ತಿದ್ದಾರೆ. ಜಾನುವಾರುಗಳು ಕೂಡ ನೀರಿಲ್ಲದಂತಾಗಿದೆ. ಸರ್ಕಾರ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬರ ನಿರ್ವಹಣೆ ಮಾಡಬೇಕಿರುವ ಸರ್ಕಾರ ಗ್ಯಾರಂಟಿ ಸಮಾವೇಶಗಳನ್ನು ನಡೆಸುತ್ತಾ ಜನರ ಸಂಕಷ್ಟಗಳಿಗೆ ಸ್ಪಂದಿಸುವುದನ್ನೇ ಮರೆತಿದೆ. ಯಾವೊಬ್ಬ ಸಚಿವರು ಜಿಲ್ಲಾ ಪ್ರವಾಸ ಅಥವಾ ಕೆಡಿಪಿ ಸಭೆಯನ್ನು ನಡೆಸಿಲ್ಲ. ಇಂತಹ ಸರ್ಕಾರ ನಮಗೆ ಬೇಕೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಮಗೆ ನೀರು ಇಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಅಲ್ಲಿನ ಡಿಎಂಕೆ ಸರ್ಕಾರವನ್ನು ಸಂತೃಪ್ತಗೊಳಿಸಲು ಹೊರಟಿದೆ. ಕನ್ನಡಿಗರ ವಿಶ್ವಾಸದ್ರೋಹಿ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಸ್ವಾಭಿಮಾನಿ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ ವಾಗ್ದಾಳಿ ನಡೆಸಿದರು.ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ರವಿಕುಮಾರ್, ಶಾಸಕರಾದ ರವಿ ಸುಬ್ರಹ್ಮಣ್ಯ, ಸಿ.ಕೆ.ರಾಮಮೂರ್ತಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬಿಜೆಪಿ ಬೆಂಗಳೂರು ಕೇಂದ್ರ ಅಧ್ಯಕ್ಷ ಸಪ್ತಗಿರಿ ಗೌಡ, ರಾಜ್ಯದ ಮುಖ್ಯ ವಕ್ತಾರ ಅಶ್ವತ್ಥ್ ನಾರಾಯಣ ಗೌಡ, ಮಾಜಿ ಮಹಾಪೌರ ಗೌತಮ್ ಜೈನ್, ಯುವ ಮುಖಂಡ ಡಾ। ಅರುಣ್ ಸೋಮಣ್ಣ, ಉಮೇಶ್ ಶೆಟ್ಟಿ ಸೇರಿದಂತೆ ಬಿಜೆಪಿ ಮೋರ್ಚಾಗಳ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಬೆಂಗಳೂರು ಮಹಾನಗರದ ಎಲ್ಲಾ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))