ಮಹಾರಾಷ್ಟ್ರ ಮಾದರಿಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು ಹಾಗೂ ವಿವಿಧ ರೈತಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕತರು ಒಣಗಿದ ಪೈರು, ಒಣಗಿದ ಬೆಳೆಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾರಾಷ್ಟ್ರ ಮಾದರಿಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು ಹಾಗೂ ವಿವಿಧ ರೈತಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕತರು ಒಣಗಿದ ಪೈರು, ಒಣಗಿದ ಬೆಳೆಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಇತರರು ರೈತರ ಉಡುಪಿನಲ್ಲಿಯೇ ಆಗಮಿಸಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರೊಂದಿಗೆ ಧರಣಿ ನಡೆಸಿ ಸಾಲಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರಾಜ್ಯ ಸರ್ಕಾರ ಕೇವಲ ₹2500 ಇನಪುಟ್ ಸಬ್ಸಿಡಿ ನೀಡುವ ಮೂಲಕ ಸಂಕಷ್ಟದಲ್ಲಿರುವ ರೈತ ಕುಲಕ್ಕೆ ಅಪಮಾನ ಮಾಡಿದೆ. ಕೂಡಲೇ ಮಹಾರಾಷ್ಟ್ರ ಮಾದರಿಯಲ್ಲಿ ಸಂಪೂರ್ಣ ಸಾಲಮನ್ನಾ ಮಾಡಿ ರೈತನಿಗೆ ಅಭಯ ನೀಡಬೇಕು. ಕೈಯಲ್ಲಿರುವ ಒಣಗಿದ ಬೆಳೆ ವಿಜಯಪುರ ಜಿಲ್ಲೆಯ ರೈತರ ಇಂದಿನ ದುಃಸ್ಥಿತಿಯ ಸಂಕೇತವಾಗಿದೆ. ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿದ್ದರೂ, ಯಾವುದೇ ಪಕ್ಷದ ಪದಾಧಿಕಾರಿಯಾಗಿ ಅಥವಾ ರಾಜಕೀಯ ಮುಖಂಡನಾಗಿ ಇಲ್ಲಿಗೆ ಬಂದಿಲ್ಲ. ಬದಲಾಗಿ, ಕಷ್ಟದಲ್ಲಿರುವ ರೈತರ ಪ್ರತಿನಿಧಿಯಾಗಿ, ಒಬ್ಬ ಸಾಮಾನ್ಯ ರೈತನಾಗಿ ಈ ಮನವಿಯನ್ನು ಸರ್ಕಾರಕ್ಕೆ ಮಾಡುತ್ತಿರುವೆ ಎಂದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಡಾ.ಸುರೇಶ ಬಿರಾದಾರ, ಉಮೇಶ ಕೋಳಕೂರ, ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ಸಚೀನ ಬೊಂಬಳೆ, ಬಾಲರಾಜ ರೆಡ್ಡಿ, ಭರತ ಕೋಳಿ, ಮಹೇಂದ್ರ ನಾಯಕ, ವಿಜಯ ಜೋಶಿ, ಕೃಷ್ಣಾ ಗುನ್ಹಾಳಕರ, ವಿಕಾಸ ಪದಕಿ, ಜಗದೀಶ ಮುಚ್ಚಂಡಿ, ಈರಣ್ಣ ರಾವೂರ, ರಜನಿ ಸಂಬಣ್ಣಿ, ಸಿದ್ದು ಮಲ್ಲಿಕಾರ್ಜುನಮಠ ಪಾಲ್ಗೊಂಡಿದ್ದರು.