ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

| Published : Jun 21 2025, 12:49 AM IST

ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ಒಂದು ತಾಸು ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಅಭಿಯಂತರ ಜಯಂತ್ ಅವರನ್ನು ತರಾಟೆಗೆ ತೆಗೆದುಕೊಂಡ ಡಾ.ನವೀನ್ ಮಾಹಿತಿ ಕೊಡಲು ಅರ್ಜಿಕೊಟ್ಟರು. ನಿರ್ಲಕ್ಷ್ಯ ಮಾಡಿದ್ದು ಏಕೆ. ವಿಪಕ್ಷಕ್ಕೆ ಮಾಹಿತಿ ಕೇಳುವ ಹಕ್ಕಿಲ್ಲವೇ. ನಿಮ್ಮ ಧೋರಣೆ ಸರಿಯಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೃಷ್ಣರಾಜಸಾಗರ ಅಣೆಕಟ್ಟೆ ಬಳಿ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಅಮ್ಯೂಸ್ ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಕಾಮಗಾರಿ ಸಿದ್ಧತೆ ವಿರುದ್ಧ ಶುಕ್ರವಾರ ರಾಜ್ಯ ಬಿಜೆಪಿ ರೈತಾ ಮೋರ್ಚಾ ಮತ್ತು ಜಿಲ್ಲಾ ಮೋರ್ಚಾ ಮುಖಂಡರು, ಕಾರ್ಯಕರ್ತರು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ನೇತೃತ್ವದಲ್ಲಿ ರಾಜ್ಯ ಸರ್ಕಾರದ ನಡೆ ಮತ್ತು ಕಾ.ನೀ.ನಿಗಮ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಮುಖಂಡರು, ಕಾರ್ಯಕರ್ತರು, ಸ್ಥಳಕ್ಕೆ ಬಂದು ಎರಡು ಗಂಟೆ ಕಳೆದರೂ ಕಾವೇರಿ ನೀರಾವರಿ ನಿಗಮ ಯಾವುದೇ ಅಧಿಕಾರಿಗಳು ಬಾರದ ಕಾರಣ ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್ ಎಸ್ ಬೃಂದಾವನ ಉನ್ನತ್ತಿಕರ ಹೆಸರಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ಯೋಜನೆಗೆ ಯಾವ ಪ್ರಾಧಿಕಾರ ಮತ್ತು ಇಲಾಖೆಗಳಿಂದ ನಿಮಗೆ ಅನುಮತಿ ಸಿಕ್ಕಿದೆ ಎಂದು ಪ್ರಶ್ನಿಸಿದರು.

ಡಿಪಿಆರ್ ಆಗಿದೆಯೇ, ಡ್ಯಾಂ ಸೇಫ್ಟಿ ಮ್ಯಾನಜೆಮೆಂಟ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ಕೆಲಸ ನಡೆಸಲು ಮತ್ತು ಕೇಂದ್ರ ಸರ್ಕಾರ ಅನುಮತಿ ನೀಡಿದೆಯೇ ಎಂಬ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಕಳೆದ ಜೂನ್ 20 ರಂದು ನಿಗಮದ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಬರುವುದಾಗಿ, ಜೂನ್ 15ರಂದು ಜಿಲ್ಲಾ ಬಿಜೆಪಿ ರೈತಾ ಮೋರ್ಚಾದಿಂದ ಅರ್ಜಿ ಸಲ್ಲಿಸಿ ಹಿಂಬರ ಕೂಡ ಪಡೆಯಲಾಗಿತ್ತು. ಆದರೆ, ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದನ್ನು ತೀವ್ರವಾಗಿ ಖಂಡಿಸಿದರು.

ಸುಮಾರು ಒಂದು ತಾಸು ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಅಭಿಯಂತರ ಜಯಂತ್ ಅವರನ್ನು ತರಾಟೆಗೆ ತೆಗೆದುಕೊಂಡ ಡಾ.ನವೀನ್ ಮಾಹಿತಿ ಕೊಡಲು ಅರ್ಜಿಕೊಟ್ಟರು. ನಿರ್ಲಕ್ಷ್ಯ ಮಾಡಿದ್ದು ಏಕೆ. ವಿಪಕ್ಷಕ್ಕೆ ಮಾಹಿತಿ ಕೇಳುವ ಹಕ್ಕಿಲ್ಲವೇ. ನಿಮ್ಮ ಧೋರಣೆ ಸರಿಯಿಲ್ಲ ಎಂದು ಕಿಡಿಕಾರಿದರು.

ಕಾವೇರಿ ಆರತಿ ಯೋಜನೆ ಕಾಮಗಾರಿ ಸಿದ್ಧತೆ ಮಾಡುತ್ತಿರುವುದು ಸರಿಯಲ್ಲ. ಉತ್ತಮ ದರ್ಜೆ ತೆಂಗಿನ ಸಸಿ ಮತ್ತು ತೆಂಗಿನ ತೋಟದ ಪರಿಸರ ಹಾಳು ಮಾಡಿದ್ದೀರಿ. ಟೆಂಡರ್ ಪಡೆದಿರುವ ಕಂಪನಿಗೆ ಶೆಡ್, ಸಾಮಗ್ರಿ ಹಾಗೂ ಕಾಂಕ್ರೀಟ್ ಮಿಕ್ಸ್ರ್ ಹಾಕಲು ಜಾಗ ನೀಡಿದ್ದೀರಿ. ಇದರಿಂದ 90 ವರ್ಷಗಳಿಂದ ಇರುವ ತೆಂಗಿನ ತೋಟಕ್ಕೆ ಭಾರಿ ಹಾನಿಯಾಗಿದೆ. ಕೂಡಲೇ ಇದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ನನಗೆ ಪ್ರತಿಭಟನೆ ನಡೆಸುವ ಬಗ್ಗೆ ಮಾಹಿತಿ ಇರಲಿಲ್ಲ. ಸ್ಥಳ ಪರಿಶೀಲನೆಗಾಗಿ ತೆರಳಿದ್ದಾಗಿ ತಿಳಿಸಿ ಕಾವೇರಿ ಆರತಿಗೆ ಟೆಂಡರ್ ಆಗಿದ್ದು, ಕಾರಣಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಅಮ್ಯುಸ್‌ಮೆಂಟ್ ಪಾರ್ಕ್ ಗೆ ಇನ್ನೂ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಪರಿಸರ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆ. ಇದರ ಕುರಿತು ದಾಖಲಾತಿ ನೀಡುತ್ತೇನೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಶೋಕ್, ರಾಜ್ಯ ಕಾರ್ಯದರ್ಶಿ ಅಶೋಕ್ ಜಯರಾಂ, ಜಿಲ್ಲಾ ರೈತಾ ಮೋರ್ಚಾ ಅಧ್ಯಕ್ಷ ಜವರೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಿಂಗೇಗೌಡ, ಆನಂದ, ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್ ಕನ್ನಂಬಾಡಿ, ಮೇಲುಕೊಟೆ ನಿರಂಜನಬಾಬು, ಶ್ರೀಧರ್ ಮೇಳಾಪುರ, ಮಹೇಶ್ ಕಣಿವೆ, ಹೆಮ್ಮಿಗೆ ಕೃಷ್ಣ, ಭರತ್ ರಾಜಶೇಖರ್, ಹುಲಿಕೆರೆ ರಾಜಣ್ಣ, ಶಂಕರ್, ಮಂಜುನಾಥ್ ಸೇರಿದಂತೆ ಇತರರು ಇದ್ದರು.