ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
ಕನ್ನಡಪ್ರಭವಾರ್ತೆ, ಸೋಮವಾರಪೇಟೆ
ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು, ಪ್ರಸಕ್ತ ವರ್ಷ ಅತೀವೃಷ್ಟಿಯಿಂದಾಗಿ ಕಾಫಿ, ಕರಿಮೆಣಸು ನಷ್ಟಗೊಂಡಿದ್ದರೂ ಕಾಂಗ್ರೆಸ್ ಸರ್ಕಾರ ಈವರೆಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಅತೀವೃಷ್ಟಿಯಿಂದಾಗಿ ಕೃಷಿ ಫಸಲು ನಷ್ಟವಾಗಿದ್ದರೂ, ಪರಿಹಾರ ಘೋಷಿಸಿಲ್ಲ. ಮೊನ್ನೆ ಒಂದಷ್ಟು ಪರಿಹಾರ ಘೋಷಣೆ ಮಾಡಿದ್ದರೂ ಕೊಡಗು ಜಿಲ್ಲೆಯನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.ಸ್ಥಳೀಯ ಅಧಿಕಾರಿಗಳು ಶೇ. 30ಕ್ಕಿಂತ ಕಡಿಮೆ ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ಇದು ಶಾಸಕರ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ. ಅಧಿಕಾರಿಗಳಿಗೆ ಸ್ಪಷ್ಟ ಹಾಗೂ ಕಟ್ಟು ನಿಟ್ಟಿನ ನಿರ್ದೇಶನ ನೀಡುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಇದರಿಂದಾಗಿ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ನಿಂದ ಬರುವ ನಷ್ಟ ಪರಿಹಾರದಿಂದಲೂ ರೈತರು ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಮಾಡಿಕೊಂಡಿರುವ ಸಿ ಮತ್ತು ಡಿ ಭೂಮಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸಿ ಮತ್ತು ಡಿ ಭೂಮಿಯನ್ನು ಸರ್ಕಾರ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.ಸಚಿವ ಈಶ್ವರ್ ಖಂಡ್ರೆ ಅವರು 1980 ರಿಂದ ಈಚೆಗೆ ಹಕ್ಕುಪತ್ರ ನೀಡಿರುವುದನ್ನು ಪುನರ್ ಪರಿಶೀಲಿಸಲು ಸೂಚಿಸಿದ್ದಾರೆ. ಇದು ಮತ್ತೊಮ್ಮೆ ರೈತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಕೊಡಗಿನಲ್ಲಿ ಆನೆ, ಹುಲಿ ಹಾವಳಿ ತಡೆಗೆ ಯಾವುದೇ ಶಾಶ್ವತ ಪರಿಹಾರ ಕಂಡುಹಿಡಿದಿಲ್ಲ. ನಷ್ಟ ಪರಿಹಾರವನ್ನೂ ಹೆಚ್ಚಿಸಿಲ್ಲ ಎಂದು ದೂರಿದರು.ಬಿಜೆಪಿ ಮುಖಂಡ ಹರಪಳ್ಳಿ ರವೀಂದ್ರ ಮಾತನಾಡಿ, ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ರೈತರು ಅತೀವೃಷ್ಟಿಯಿಂದ ನಷ್ಟ ಅನುಭವಿಸಿದ್ದರೂ ಸರ್ಕಾರ ಸಹಾಯಕ್ಕೆ ನಿಲ್ಲುತ್ತಿಲ್ಲ. ಸಮಸ್ಯೆ ಆಲಿಸುತ್ತಿಲ್ಲ. ಕೊಡಗಿನಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಅಧಿಕಾರಿಗಳು ಪರಿಶೀಲಿಸುತ್ತಿಲ್ಲ ಎಂದು ಆರೋಪಿಸಿದರು.ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಂಜಿ ಪೂಣಚ್ಚ ಮಾತನಾಡಿ, ಕೃಷಿ ಸಮ್ಮಾನ್ ಯೋಜನೆಯಡಿ ಮೋದಿ ಸರ್ಕಾರ ವಾರ್ಷಿಕ 6 ಸಾವಿರ, ಹಿಂದಿನ ಬಿಜೆಪಿ ಸರ್ಕಾರ 4 ಸಾವಿರ ಸಾವಿರದಂತೆ ಒಟ್ಟು 10 ಸಾವಿರ ಸಹಾಯಧನವನ್ನು ರೈತರಿಗೆ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದ ಪಾಲನ್ನು ರದ್ದುಗೊಳಿಸಿದೆ. ರೈತರ ಮಕ್ಕಳ ವಿದ್ಯಾರ್ಥಿ ವೇತನವನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದರು.ಇದರೊಂದಿಗೆ ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಹತ್ತಾರು ಭರವಸೆಗಳನ್ನು ಈಡೇರಿಸದೇ ರೈತರಿಗೆ ಮೋಸ ಮಾಡಿದೆ ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ಅಕ್ರಮ ಸಕ್ರಮ ಸಮಿತಿ ಸಭೆಗಳು ನಡೆಯುತ್ತಿಲ್ಲ. ರೈತರ ಜಾಗದ ದುರಸ್ತಿ ಕಾರ್ಯ ಆಗುತ್ತಿಲ್ಲ ಎಂದು ದೂರಿದರು. ರೈತರಿಗೆ ಪರಿಹಾರ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವ ಮನವಿ ಪತ್ರವನ್ನು ತಹಸೀಲ್ದಾರ್ ಕೃಷ್ಣಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ರೈತ ಮೋರ್ಚಾ ರಾಜ್ಯ ಸಮಿತಿ ಸದಸ್ಯೆ ಯಮುನ ಚಂಗಪ್ಪ, ಜಿಲ್ಲಾ ಕಾರ್ಯದರ್ಶಿ ಆಲೇಮಾಡ ಸುಧೀರ್, ಪ್ರಮುಖರಾದ ನೆಲ್ಲೀರ ಚಲನ್, ದರ್ಶನ್ ಜೋಯಪ್ಪ, ಮನುಕುಮಾರ್ ರೈ, ಅನಂತ್ ಕುಮಾರ್, ಕವಿತಾ ವಿರೂಪಾಕ್ಷ, ಹೆಚ್.ಕೆ. ಮಾದಪ್ಪ, ಮೋಕ್ಷಿಕ್‌ರಾಜ್, ಮೋಹಿತ್ ತಿಮ್ಮಯ್ಯ, ಶ್ರೀನಿಧಿ ಲಿಂಗಪ್ಪ, ಎಸ್.ಆರ್. ಸೋಮೇಶ್, ಶರತ್‌ಚಂದ್ರ, ಸೇರಿದಂತೆ ಇತರರು ಭಾಗಿಯಾಗಿದ್ದರು.