ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿಯ ‘ನವಯುಗ ನವಪಥ’ 9 ಅಂಶಗಳ ಪ್ರಣಾಳಿಕೆ ಬಿಡುಗಡೆ

| Published : Apr 24 2024, 02:24 AM IST

ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿಯ ‘ನವಯುಗ ನವಪಥ’ 9 ಅಂಶಗಳ ಪ್ರಣಾಳಿಕೆ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ದ.ಕ. ಲೋಕಸಭಾ ಕ್ಷೇತ್ರದ ‘ನವಯುಗ ನವಪಥ’ 9 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ದ.ಕ. ಜಿಲ್ಲೆಗೆ ಕೇಂದ್ರದಿಂದ ತಂದ 1 ಲಕ್ಷ ಕೋಟಿ ರು.ಗಳಲ್ಲಿ ಬಾಕಿ ಇರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ಅಲ್ಲದೆ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಗೆ ಬದ್ಧತೆ ಹೊಂದಿರುವುದಾಗಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ದ.ಕ. ಲೋಕಸಭಾ ಕ್ಷೇತ್ರದ ‘ನವಯುಗ ನವಪಥ’ 9 ಅಂಶಗಳ ಪ್ರಣಾಳಿಕೆ ಬಿಡುಗಡೆ ವೇಳೆ ಅವರು ಮಾತನಾಡಿದರು.

ಪ್ರಣಾಳಿಕೆ ಬಿಡುಗಡೆಗೊಳಿಸಿದ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮಾತನಾಡಿದರು.

ಬಿಜೆಪಿಯ 9 ಅಂಶಗಳ ಪ್ರಣಾಳಿಕೆಯಲ್ಲಿ ಏನೇನಿದೆ?

1-ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಾಪುಗಾಲು:

-ಪರಿಸರದ ಸಂರಕ್ಷಣೆ ಗಮನದಲ್ಲಿರಿಸಿಕೊ೦ಡು ತಾಂತ್ರಿಕ ಪರಿಣಿತಿ ಬಳಸಿ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಮಂಗಳೂರು ಮತ್ತು ಬೆಂಗಳೂರಿನ ನಡುವಣ ಸಂಪರ್ಕ ಸಮಸ್ಯೆಗಳನ್ನು ಪರಿಹರಿಸುವುದು.-ಮಂಗಳೂರು-ಬೆಂಗಳೂರು ಉಭಯ ನಗರಗಳ ನಡುವೆ ಸಂಚಾರ ಸುಗಮಗೊಳಿಸಿ ವಾಣಿಜ್ಯೋದ್ಯಮ, ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಿರಾಡಿಘಾಟ್ ಹೆದ್ದಾರಿ ಮಾರ್ಗದಲ್ಲಿ ಸರ್ವಋತು ರಸ್ತೆ ನಿರ್ಮಾಣಕ್ಕೆ ಆದ್ಯತೆ.

-ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಹಾಗೂ ಸರಕು ಸಾಗಣಿಕೆಯನ್ನು ಸುಗಮಗೊಳಿಸಲು ಹೊಸ ಹೈಸ್ಪೀಡ್ ರೈಲು ಸಂಪರ್ಕಕ್ಕಾಗಿ ನೂತನ ಮಾರ್ಗದ ಸಾಧ್ಯತೆಗಳ ಪರಿಶೀಲನೆ.

2-ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ:

-ದಕ್ಷಿಣ ಕನ್ನಡ ಜಿಲ್ಲೆಯ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಉತ್ತಮ ಆಡಳಿತ ಹಾಗೂ ಪೂರಕ ವ್ಯವಸ್ಥೆಗಳನ್ನು ಒದಗಿಸಿ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ.

-ಸೂಕ್ಷ್ಮ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೇಜನ. ಪ್ರಮುಖವಾಗಿ ಆಹಾರ ಸಂಸ್ಕರಣೆ, ಜವಳಿ, ಮೀನುಗಾರಿಕೆ, ಸಮುದ್ರ ಅವಲಂಬಿತ ಉತ್ಪನ್ನಗಳ ವಿಶೇಷ ಕ್ಲಸ್ಟರ್‌ಗಳ ಸ್ಥಾಪನೆ.

-ವಿವಿಧ ಕ್ಷೇತ್ರಗಳ ಸಂಶೋಧನೆ ಹಾಗೂ ಅಭಿವೃದ್ಧಿ ಘಟಕಗಳನ್ನು ದಕ್ಷಿಣ ಕನ್ನಡದಲ್ಲಿ ಸ್ಥಾಪಿಸಲು ಪ್ರಮುಖ ಜಾಗತಿಕ ಕಂಪನಿಗಳಿಗೆ ಆಹ್ವಾನ

3-ಸ್ಟಾರ್ಟ್ ಅಪ್ ಮತ್ತು ಉದ್ಯಮಶೀಲತೆ: -ಜಿಲ್ಲೆಯಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ಸಲುವಾಗಿ ಉದಯೋನ್ಮುಖ ಉದ್ಯಮಿಗಳಿಗೆ ಬೆಂಬಲ ಮತ್ತು ಮಾರ್ಗದರ್ಶನ ಒದಗಿಸಿ ಹೊಸ ಸ್ಮಾರ್ಟ್ ಅಪ್‌ಗಳ ಸ್ಥಾಪನೆಗೆ ಪೂರಕ ಸೌಲಭ್ಯಗಳೊಂದಿಗೆ ವಾತಾವರಣ ನಿರ್ಮಾಣ. ---#Back To Ooru ಕಳೆದ ಕೆಲವು ದಶಕಗಳಲ್ಲಿ ದೇಶದ ವಿವಿಧೆಡೆ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿರುವ ದಕ್ಷಿಣ

ಕನ್ನಡದವರನ್ನು ಮತ್ತೆ ಊರಿಗೆ ಕರೆತಂದು ಸ್ಥಳೀಯವಾಗಿ ಉದ್ಯಮ ಆರಂಭಿಸಿ ಉದ್ಯೋಗ ಸೃಷ್ಟಿಸಲು ಪ್ರೇರೇಪಣೆ.

-BYOB-Be Your Own Boss ಉದ್ಯಮಶೀಲರಾಗಲು ಉತ್ಸುಕರಾಗಿರುವ ಯುವಮನಸ್ಸುಗಳಿಗೆ ಪ್ರೋತ್ಸಾಹ ನೀಡಲು BYOB ಕಾರ್ಯಕ್ರಮ.-ಗೇಮಿಂಗ್, ಅನಿಮೇಷನ್, ಡಿಸೈನ್ ಮುಂತಾದ ಸೃಜನಶೀಲ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ನೀಡುವುದು. ಫಿಲ್ಮ್‌ ಸಿಟಿ ನಿರ್ಮಾಣ.

4-ಪ್ರವಾಸೋದ್ಯಮ:

-ಸಾಹಸ ಕ್ರೀಡೆಗಳಿಗೆ ಪೂರಕವಾದ ಸಸಿಹಿತ್ತು ಬೀಚ್‌ನ ಅಭಿವೃದ್ಧಿಗೆ ಒತ್ತು, ಪ್ರವಾಸೋದ್ಯಮದ ಪ್ರಗತಿಗೆ ಕಡಲತೀರದ ಮೂಲಸೌಕರ್ಯಕ್ಕೆ ಆದ್ಯತೆ.

-ದೇಗುಲ ಪ್ರವಾಸೋದ್ಯಮ, ಜಾನಪದ ಮತ್ತು ಆಹಾರ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮದ ಉತ್ತೇಜನಕ್ಕೆ ಆದ್ಯತೆ.

5-ನಾರೀ ಶಕ್ತಿ:

-ನಮ್ಮ ಜಿಲ್ಲೆಯ ಮಹಿಳೆಯರು ಆತಿಥ್ಯ, ಜವಳಿ, ಆಹಾರ, ಪ್ರವಾಸ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಕೊಡುಗೆ ನೀಡಿ ಆರ್ಥಿಕ ಪ್ರಗತಿಗೆ ಬೆನ್ನೆಲುಬಾಗಿದ್ದಾರೆ.

-ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಜಿಲ್ಲೆಯ ಪ್ರಮುಖ ಮಹಿಳಾ ಉದ್ಯಮಿಗಳ ಜೊತೆಗೆ ಚರ್ಚೆ.

6-ಸಂಸ್ಕೃತಿ ಹಾಗೂ ಪರಂಪರೆ:

-ನಮ್ಮ ನೆಲದ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಪ್ರಚಾರ

-ತುಳುನಾಡು ಹೆರಿಟೇಜ್ ಎಕ್ಸ್ಪೀರಿಯನ್ಸ್ ಸೆಂಟರ್ ಸ್ಥಾಪನೆ, ತುಳು ಭಾಷೆಗೆ ಸೂಕ್ತ ಸ್ಥಾನಮಾನ ದೊರೆಕಿಸುವ ದಿಕ್ಕಿನಲ್ಲಿ ವಿಶೇಷ ಪ್ರಯತ್ನ.

-ದೇಯಿ ಬೈದೇತಿ ಹೆಸರಿನಲ್ಲಿ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆ.

7-ಕೃಷಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ:

-ಕೃಷಿಕರಿಗೆ ಸುಸ್ಥಿರಾಭಿವೃದ್ಧಿ ಮತ್ತು ತಾಂತ್ರಿಕ ಸಹಕಾರ, ಸಹಜ ಕೃಷಿ ಪದ್ಧತಿ ಬಳಕೆಗೆ ಉತ್ತೇಜನ, ದೇಶಿ ಜಾನುವಾರು ತಳಿಗಳ ರಕ್ಷಣೆ, ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ.

-ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಮೀನುಗಾರಿಕೆ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಉನ್ನತೀಕರಿಸುವ ಪ್ರಯತ್ನ.

8-ಯುವಜನತೆ ಮತ್ತು ಸಂವಹನ: -ನಮ್ಮ ಯುವಶಕ್ತಿ ನಮ್ಮ ಅತ್ಯಮೂಲ್ಯ ಸಂಪನ್ಮೂಲ

-ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಕೌಶಲ ಆಧಾರಿತ ತರಬೇತಿ

-ಯುವಜನತೆಯಲ್ಲಿ ಮಾದಕದ್ರವ್ಯದ ವ್ಯಸನ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ.

-ಕ್ರೀಡಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆಗೆ ಪೂರಕವಾಗುವಂತಹ ಕ್ರೀಡಾ ಮೂಲಸೌಕರ್ಯ ಹಾಗೂ ವಿಶೇಷ ತರಬೇತಿಗೆ ಆದ್ಯತೆ.

-ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ಶಾಲೆ ಸ್ಥಾಪನೆ.

9-ಕರಾವಳಿ ಅಭಿವೃದ್ಧಿ ಮತ್ತು ಭದ್ರತೆ:

-ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಾಣಿಜ್ಯದ ಪ್ರಗತಿಗೆ ಇರುವ ವಿಫುಲ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕರಾವಳಿ ತೀರದಲ್ಲಿ ಮೂಲಸೌಕರ್ಯ ಅಭಿವೃದ್ಧಿ.

- ಪ್ರಮುಖ ಕರಾವಳಿ ನಗರಗಳ ನಡುವೆ ಜಲಮಾರ್ಗದ ಸಾಧ್ಯತೆಗಳ ಅನ್ವೇಷಣೆ.

- ಭಾರತದ ಮೊದಲ ಕರಾವಳಿ ರಕ್ಷಣಾ ಅಕಾಡೆಮಿಯ ಸಮಯೋಚಿತ ಸ್ಥಾಪನೆ ಹಾಗೂ ಕಾರ್ಯಾರಂಭ.

- ಭಯೋತ್ಪಾದಕ ಚಟುವಟಿಕೆ ನಿಗ್ರಹಿಸುವ ಹಾಗೂ ಜಾಲವನ್ನು ಕಿತ್ತುಹಾಕುವ ಉದ್ದೇಶದೊ೦ದಿಗೆ ಎನ್‌ಐಎ ಮತ್ತು ವಿಧಿವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆ.