ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬಂಟ್ವಾಳದಲ್ಲಿ ಬಿಜೆಪಿ ರಸ್ತೆ ತಡೆ, ಪ್ರತಿಭಟನೆ

| Published : Jun 21 2024, 01:07 AM IST

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬಂಟ್ವಾಳದಲ್ಲಿ ಬಿಜೆಪಿ ರಸ್ತೆ ತಡೆ, ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಿಭಟನಾ ಸಭೆಯ ಬಳಿಕ ಶಾಸಕರು ಸಹಿತ ಬಿಜೆಪಿಯ ಪ್ರಮುಖರು ಹೆದ್ದಾರಿಯಲ್ಲಿ ಕೆಲ ನಿಮಿಷಗಳ ಕಾಲ ಕುಳಿತು ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರಸ್ತೆ ತಡೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬಂಟ್ವಾಳ ಬಿಜೆಪಿ ಮಂಡಲ ವತಿಯಿಂದ ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುರುವಾರ ಬಿ ಸಿ ರೋಡಿನಲ್ಲಿ ಪ್ರತಿಭಟನೆ ಹಾಗೂ ಸಾಂಕೇತಿಕ ರಸ್ತೆ ತಡೆ ನಡೆಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಸ್ವಾರ್ಥದ ರಾಜಕೀಯ ಮತ್ತು ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಮೋಸ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ,ಇದೀಗ ಜನರನ್ನು ಬಡತನದ ಕೂಪಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು. ಆದರೆ ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ತಕ್ಕ ಉತ್ತರವನ್ನು ನೀಡಿ, ನರೇಂದ್ರ ಮೋದಿ ಅವರಿಗೆ ಮೂರನೇ ಬಾರಿ ಪಟ್ಟಾಭಿಷೇಕ ಮಾಡಿದ್ದಾರೆ. ಈ ಕೋಪವನ್ನು ಬೆಲೆಏರಿಕೆಯ ಮೂಲಕ ತೋರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಪಂಚ ಗ್ಯಾರಂಟಿಯ ಕಾರಣದಿಂದ ಒಂದೇ ವರ್ಷದಲ್ಲಿ ಮೂರು ಬಾರಿ ತೆರಿಗೆ ಏರಿಸಿದ ಸಿದ್ದರಾಮಯ್ಯ ಸರ್ಕಾರ ಗರೀಬಿ ಹಠಾವೋ ದ ಬದಲಾಗಿ ಗರೀಬಿ ಬಚಾವೋ ಎನ್ನುವ ಯೋಜನೆ ತಂದಿದೆ ಎಂದು ಟೀಕಿಸಿದರಲ್ಲದೆ, ಬಿಟ್ಟೀ ಭಾಗ್ಯ ದೇಶಕ್ಕೆ ಅಪಾಯಕಾರಿ ಎಂದರು.

ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ ಆರ್ ಕೋಟ್ಯಾನ್ , ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪೂಜಾ ಪೈ, ಸುಲೋಚನ ಜಿ.ಕೆ.ಭಟ್, ವಜ್ರನಾಥ್ ಕಲ್ಲಡ್ಕ, ಮಾಧವ ಮಾವೆ, ದೇವಪ್ಪ ಪೂಜಾರಿ, ವಿಕಾಸ್ ಪುತ್ತೂರು, ದೇವದಾಸ್ ಶೆಟ್ಟಿ, ಸಂದೇಶ್ ಶೆಟ್ಟಿ, ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಗೋವಿಂದ ಪ್ರಭು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ ಆರ್ ಕೋಟ್ಯಾನ್‌ ಸ್ವಾಗತಿಸಿದರು. ರವೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡೊಂಬಯ್ಯ ಅರಳ ವಂದಿಸಿದರು. ಪ್ರತಿಭಟನಾ ಸಭೆಯ ಬಳಿಕ ಶಾಸಕರು ಸಹಿತ ಬಿಜೆಪಿಯ ಪ್ರಮುಖರು ಹೆದ್ದಾರಿಯಲ್ಲಿ ಕೆಲ ನಿಮಿಷಗಳ ಕಾಲ ಕುಳಿತು ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರಸ್ತೆ ತಡೆ ನಡೆಸಿದರು. ಪೊಲೀಸರ ವಿನಂತಿ ಮೇರೆಗೆ ರಸ್ತೆ ತಡೆಯನ್ನು ಮುಕ್ತಾಯಗೊಳಿಸಿದರು.