ಸಾರಾಂಶ
ಸಂಪುಟದಿಂದ ಸಚಿವರನ್ನು ವಜಾಗೊಳಿಸಬೇಕು ಎಂದು ಯುವ ಮೋರ್ಚಾ ಕಾರ್ಯಕರ್ತರು ಆಗ್ರಹಿಸಿದರು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಹಾಗೂ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಯುವಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶನಿವಾರ ನಗರದ ಪಿವಿಎಸ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಪ್ರತಿಭಟನೆ ನಡೆಯಿತು.ಸಂಪುಟದಿಂದ ಸಚಿವರನ್ನು ವಜಾಗೊಳಿಸಬೇಕು ಎಂದು ಯುವ ಮೋರ್ಚಾ ಕಾರ್ಯಕರ್ತರು ಆಗ್ರಹಿಸಿದರು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮಾತನಾಡಿ, ವಾಲ್ಮೀಕಿ ನಿಗಮದ ನೂರಾರು ಕೋಟಿ ರು.ಗಳನ್ನು ದರೋಡೆ ಮಾಡುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಈ ದುಡ್ಡು ಈಗಾಗಲೇ ಬೇರೆ ರಾಜ್ಯಗಳಿಗೆ ವರ್ಗಾವಣೆ ಆಗಿದೆ. ತತ್‌ಕ್ಷಣವೇ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.ಪೊಲೀಸರು ಶಾಸಕ ಹರೀಶ್ ಪೂಂಜಾ ಅವರ ಮೇಲೆ ತರಾತುರಿಯಿಂದ ಪ್ರಕರಣ ದಾಖಲಿಸುತ್ತಾರೆ. ಕಂಕನಾಡಿ ನಮಾಜ್ ಪ್ರಕರಣದಲ್ಲಿ ‘ಬಿ’ ರಿಪೋರ್ಚ್ ಹಾಕುತ್ತಾರೆ. ಆದರೆ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ಹೆಸರಿದ್ದರೂ, ಎಫ್‌ಐಆರ್ ದಾಖಲಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಜೂ.6 ರೊಳಗೆ ಸಚಿವರು ರಾಜಿನಾಮೆ ಕೊಡದಿದ್ದರೆ ಯುವಮೋರ್ಚಾ ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಿದೆ ಎಂದರು.ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಪ್ರಮುಖರಾದ ಅಶ್ವಿತ್ ಕೊಟ್ಟಾರಿ, ಮೌನೇಶ್ ಚೌಟ, ಯಶ್‌ಪಾಲ್ ಸಾಲ್ಯಾನ್, ಸಾಕ್ಷತ್ ಶೆಟ್ಟಿ, ಪ್ರಕಾಶ್ ಗರೋಡಿ, ಪ್ರಮೋದ್ ಕರ್ಕೇರ, ಮುರಳೀಧರ್ ಕೊಣಾಜೆ, ಆಶಿತ್, ಪ್ರೀತಮ್, ಅವಿನಾಶ್, ಮಿಥುನ್ ಭಂಡಾರಿ, ಸುರೇಶ್ ಕೋಟ್ಯಾನ್, ಭವಿಷ್ ಶೆಟ್ಟಿ, ಜೀತೇಶ್ ಮತ್ತಿತರರಿದ್ದರು.