ಬಿಜೆಪಿ, ಆರೆಸ್ಸೆಸ್‌ನವರಿಗೆ ಇತಿಹಾಸ ಗೊತ್ತಿಲ್ಲ. ಹಾಗಾಗಿ ತಮ್ಮ ವಾಟ್ಸ್‌ಅಪ್ ಯೂನಿವರ್ಸಿಟಿಯ ಪದವೀಧರರು, ಬಾಡಿಗೆ ಭಾಷಣಕಾರರು ತಿರುಚಿ ಹೇಳುವುದನ್ನೇ ಪ್ರೋತ್ಸಾಹಿಸುವ, ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಜೆಪಿ, ಆರೆಸ್ಸೆಸ್‌ನವರಿಗೆ ಇತಿಹಾಸ ಗೊತ್ತಿಲ್ಲ. ಹಾಗಾಗಿ ತಮ್ಮ ವಾಟ್ಸ್‌ಅಪ್ ಯೂನಿವರ್ಸಿಟಿಯ ಪದವೀಧರರು, ಬಾಡಿಗೆ ಭಾಷಣಕಾರರು ತಿರುಚಿ ಹೇಳುವುದನ್ನೇ ಪ್ರೋತ್ಸಾಹಿಸುವ, ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ನಗರದ ಕಬ್ಬನ್ ಪಾರ್ಕ್‌ನ ಚನ್ನಬಸಪ್ಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಅವರು ರಚಿಸಿರುವ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ವಾಟ್ಸ್‌ಆ್ಯಪ್ ಪದವೀದರರು, ಬಾಡಿಗೆ ಭಾಷಣಕಾರರು ಮತ್ತು ಸಾಮಾಜಿಕ ಮಾಧ್ಯಮಗಳಿಂದ ನಮ್ಮ ದೇಶದ ನೈಜ ಇತಿಹಾಸಕ್ಕೆ ಬಹುದೊಡ್ಡ ಅಪಾಯವಿದೆ. ಇತಿಹಾಸ ತಿರುಚುವುದು ಇಂದು ಸಾವಿರಾರು ಕೋಟಿ ರು. ವ್ಯವಹಾರವಾಗಿ ಬದಲಾಗಿದೆ. ಟಿವಿಗಳಲ್ಲಿ ಎಲ್ಲ ಕಾರ್ಯಕ್ರಮಗಳಲ್ಲೂ ಈ ಬಾಡಿಗೆ ಭಾಷಣಕಾರರೇ ಇತಿಹಾಸಕಾರರು, ಆರ್ಥಿಕ ತಜ್ಞರು, ಆರೋಗ್ಯ ತಜ್ಞರು, ಜಾಗತಿಕ ತಜ್ಞರೂ ಆಗಿರುತ್ತಾರೆ. ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಈ ಬಾಡಿಗೆ ಭಾಷಣಕಾರರು ಹೇಳಿದ್ದನ್ನೇ ಇತಿಹಾಸ ಓದದ ಬಿಜೆಪಿ, ಆರೆಸ್ಸೆಸ್‌ನವರೂ ಒತ್ತಿ ಒತ್ತಿ ಹೇಳುತ್ತಿರುತ್ತಾರೆ. ಇದರ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.ಸಿನಿಮಾ ಮಾಡಲೂ ನಿಂತಿದ್ದಾರೆ:
ಇತ್ತೀಚೆಗೆ ಇತಿಹಾಸ ತಿರುಚುವುದು ಕೇವಲ ಹವ್ಯಾಸವಾಗಿ ಉಳಿದಿಲ್ಲ. ವಾಟ್ಸ್‌ಆ್ಯಪ್ ಯೂನಿವರ್ಸಿಟಿಯಿಂದ ಹೊರಗಡೆ ಬಂದು ಸಿನಿಮಾ ಮಾಡೋಕೆ ನಿಂತಿದ್ದಾರೆ. ಸುಳ್ಳು ಮತ್ತು ಹುಸಿ ಇತಿಹಾಸ ಹೇಳಲು ಚಿತ್ರಮಂದಿರದ ದೊಡ್ಡ ಪರದೆಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ಗುಜರಾತ್ ಫೈಲ್ಸ್, ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ, ಚಾವಾ ಹೀಗೆ ಅನೇಕ ಸಿನಿಮಾಗಳು ಬಂದಿವೆ. ಇತ್ತೀಚೆಗೆ ಬಿಡುಗಡೆಯಾದ ಧುರಂಧರ್ ಸಿನಿಮಾವನ್ನು ನೋಡಿದ ಇತಿಹಾಸ ಶಿಕ್ಷಕರು, ಈ ಸಿನಿಮಾ ನೋಡಿ ನನಗೆ ಕಣ್ಣು ತೆರೆಯಿತು ಅಂತ ಹೇಳಿದ್ದಾರೆ. ಆ ಶಿಕ್ಷಕಿ 100 ಮಕ್ಕಳ ಮೇಲೆ ಪ್ರಭಾವ ಬೀರುವ ವ್ಯಕ್ತಿ ಈ ರೀತಿ ಹೇಳುವುದೇ ಈ ಕಾಲದ ದೊಡ್ಡ ದುರಂತ ಎಂದರು.ಭಾರತದ ಇತಿಹಾಸದ ಪುಟದಲ್ಲಿ ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರ ಹೆಸರಿದೆ. ಆದರೆ, ಬ್ರಿಟಿಷರ ಇತಿಹಾಸ ಪುಟಗಳಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಗಾರರ ಹೆಸರಿದ್ದರೆ, ಅದು ಟಿಪ್ಪು ಸುಲ್ತಾನ್ ಕೂಡ ಒಬ್ಬರು. 4 ಆಂಗ್ಲೋ ಮೈಸೂರು ಯುದ್ಧ ಮಾಡಿದ್ದಾರೆ. ಬ್ರಿಟಿಷ್ ಅಧಿಕಾರಿ ಲಾರ್ಡ್ ವೆಲ್ಲೆಸ್ಲಿಯೇ ʼಟಿಪ್ಪು ರೀತಿಯ ಪರಾಕ್ರಮಿಯನ್ನು ನೋಡಿಲ್ಲ’ ಎಂದು ಬರೆಯುತ್ತಾರೆ. ಆದರೆ, ಆರೆಸ್ಸೆಸ್‌ನವರ ಪ್ರಕಾರ ಬ್ರಿಟಿಷರ ವಿರುದ್ಧ ಹೋರಾಡಿದವರು ಸ್ವಾತಂತ್ರ್ಯ ಹೋರಾಟಗಾರರಲ್ಲ. ಹಾಗಾದರೆ ಆರೆಸ್ಸೆಸ್‌ನವರೂ ಹೋರಾಟ ಮಾಡಿಲ್ಲ. ಆರ್‌ಎಸ್‌ಎಸ್, ಮೋದಿ ಅವರ ಹೆಸರಿನಲ್ಲಿಯೇ ಸಿನಿಮಾ ಬಿಡುಗಡೆಯಾಯಿತು. ಅದರ ಸಂಪಾದನೆ ನೂರು ಕೋಟಿ ದಾಟಲಿಲ್ಲ. ಯಾಕೆಂದರೆ ಅದರಲ್ಲಿ ಇತಿಹಾಸವಿರಲಿಲ್ಲ, ಸೃಷ್ಟಿಸಲೂ ಏನೂ ಇಲ್ಲ. ನೂರು ವರ್ಷದಲ್ಲಿ ಆರ್‌ಎಸ್‌ಎಸ್‌ನವರ ಹತ್ತು ಸಾಧನೆ ಕೇಳಿದರೆ ಹೇಳುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ನೇರವಾಗಿ ನನ್ನ ಬಳಿ ಮಾತನಾಡಲ್ಲ, ಬದಲಿಗೆ ಪತ್ರಿಕೆಗಳಲ್ಲಿ ನಮ್ಮ ಶಾಖೆಗಳಿಗೆ ಭೇಟಿ ನೀಡಿ ಅನ್ನುತ್ತಾರೆ. ನೇರವಾಗಿ ನಾಗಪುರಕ್ಕೆ ಹೋದರೆ ಧೀಕ್ಷೆ ಕೊಡಬಹುದೋ ಏನೋ ನೋಡೋಣ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್, ಇತಿಹಾಸಕಾರರಾದ ಡಾ.ರುಚಿಕಾ ಶರ್ಮ, ಚಿಂತಕ ಡಾ.ಸಿದ್ದನಗೌಡ ಪಾಟೀಲ್, ಪತ್ರಕರ್ತ ಸುದೀಪ್ತೋ ಮೊಂಡಲ್, ಹೋರಾಟಗಾರ ಮುನೀರ್ ಕಾಟಿಪಳ್ಳ, ಪುಸ್ತಕದ ಕತೃ ನವೀನ್ ಸೂರಿಂಜೆ ಇದ್ದರು.-ಬಾಕ್ಸ್-
2 ತಿಂಗಳಲ್ಲಿ 100 ಹೊಸಲೇಖಕರ ಪುಸ್ತಕಗಳ ಮುದ್ರಣ
ರಾಜ್ಯಾದ್ಯಂತ ಹೊಸ ಯುವ ಬರಹಗಾರರನ್ನು ಪರಿಚಯಿಸುವ ಹಾಗೂ ಪ್ರೋತ್ಸಾಹಿಸುವ ದೃಷ್ಟಿಯಿಂದ ಇನ್ನು ಎರಡು ತಿಂಗಳಲ್ಲಿ ನೂರು ಹೊಸ ಲೇಖಕರ ಪುಸ್ತಕಗಳನ್ನು ಮುದ್ರಣ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ನಮ್ಮ ಗ್ರಾಮೀಣ ಗ್ರಂಥಾಲಯಗಳಲ್ಲಿ ಮಕ್ಕಳು ಓದಬೇಕಾದ ಪುಸ್ತಕಗಳನ್ನು ಬಿಟ್ಟು, ರೋಹಿತ್ ಚಕ್ರತೀರ್ಥ, ಇನ್ನೊಬ್ಬ ಚಕ್ರವರ್ತಿ ಅವರಂತಹ, ಬಾಡಿಗೆ ಭಾಷಣಕಾರರ ಪುಸ್ತಕಗಳನ್ನು ಇಟ್ಟಿದ್ದರು. ಈಗ ಶುದ್ಧೀಕರಣ ಮಾಡಿದ್ದೇವೆ. ಸಂವಿಧಾನದ ಮೌಲ್ಯವನ್ನು ಹೇಳುವ, ಭ್ರಾತೃತ್ವ ಭಾವನೆ ಉಂಟುಮಾಡುವ, ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯೋಗವಾಗುವ ಪುಸ್ತಕಗಳನ್ನು ಇಡಲಾಗುತ್ತಿದೆ. ಈ ನಿಟ್ಟಿನಲ್ಲಿ ನೈಜ ಇತಿಹಾಸವನ್ನು ದಾಖಲಿಸುವ ಹೊಸ ಯುವ ಬರಹಗಾರರನ್ನು ಪರಿಚಯಿಸಲು ಇನ್ನೆರಡು ತಿಂಗಳಲ್ಲಿ 100 ಹೊಸ ಲೇಖಕರ ಕನ್ನಡ ಪುಸ್ತಕಗಳನ್ನು ಮುದ್ರಣ ಮಾಡಲಾಗುತ್ತಿದೆ. ಇಂಗ್ಲಿಷ್‌ನಲ್ಲೂ ನಿಜವಾದ ಇತಿಹಾಸ ಹೇಳುವವರಿಗೆ 25 ಹೊಸ ಇಂಗ್ಲೀಷ್ ಪುಸ್ತಕಗಳನ್ನು ಮುದ್ರಣ ಮಾಡಲು ತೀರ್ಮಾನಿಸಲಾಗಿದೆ ಎಂದರು.