ಸಾರಾಂಶ
ಜನಾಕ್ರೋಶ ಯಾತ್ರೆ ಉದ್ದಕ್ಕೂ ಕಾರ್ಯಕರ್ತರು ಬಿಜೆಪಿ ಪರ ಜೈ ಘೋಷಗಳನ್ನು ಮೊಳಗಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಹಾವೇರಿ: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಹಾಗೂ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ವಿರೋಧಿಸಿ ಕೈಗೊಂಡಿರುವ ಬಿಜೆಪಿ ಜನಾಕ್ರೋಶ ಯಾತ್ರೆಗೆ ಸೋಮವಾರ ನಗರದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕೈಗೊಂಡಿರುವ ಜನಾಕ್ರೋಶ ಯಾತ್ರೆ ನಗರದ ಕೆಇಬಿ ಎದುರಿನ ಸಂಗೂರ ಕರಿಯಪ್ಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು. ನಂತರ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ರ್ಯಾಲಿ ಎಂ.ಜಿ. ರೋಡ್ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯರ್ತರು ಜೆಸಿಬಿ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರಿಗೆ ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದರು.ಜನಾಕ್ರೋಶ ಯಾತ್ರೆ ಉದ್ದಕ್ಕೂ ಕಾರ್ಯಕರ್ತರು ಬಿಜೆಪಿ ಪರ ಜೈ ಘೋಷಗಳನ್ನು ಮೊಳಗಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಬಿಜೆಪಿ ನಾಯಕರು, ಮುಖಂಡರು ಮಹಾತ್ಮ ಗಾಂಧೀಜಿ ಹಾಗೂ ಹುತಾತ್ಮ ಮೈಲಾರ ಮಹಾದೇವಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಮಾವೇಶ ವೇದಿಕೆಗೆ ತೆರಳಿದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಸಿ. ಪಾಟೀಲ, ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಬಿಜೆಪಿ ಯುವ ಮುಖಂಡ ಭರತ್ ಬೊಮ್ಮಾಯಿ, ಗವಿಸಿದ್ದಪ್ಪ ದ್ಯಾಮಣ್ಣವರ, ಸಿದ್ದರಾಜ ಕಲಕೋಟಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ರಾಜ್ಯ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಂಗೌಡ್ರ, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ನಂಜುಡೇಶ್ವರ ಕಳ್ಳೇರ, ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣಿ, ಮಲ್ಲಿಕಾರ್ಜುನ ಹಾವೇರಿ, ಪರಮೇಶ್ವರಪ್ಪ ಮೇಗಳಮನಿ, ಸುರೇಶ ಹೊಸಮನಿ, ಮಂಜುನಾಥ ಓಲೇಕಾರ ಇತರರು ಇದ್ದರು.ಆಧಾರ್ ಕಾರ್ಡ್ ನವೀಕರಣಕ್ಕೆ ಸೂಚನೆಹಾವೇರಿ: ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹೊಂದಿ 10 ವರ್ಷ ಮೇಲ್ಪಟ್ಟ ನಾಗರಿಕರು ಆಧಾರ್ ನವೀಕರಣ ಮಾಡಿಸಲು ಹಾಗೂ ಈವರೆಗೆ ಆಧಾರ್ ನೋಂದಣಿ ಮಾಡದವರು ತಮ್ಮ ತಮ್ಮ ಗುರುತಿನ ದಾಖಲೆಯೊಂದಿಗೆ ನವೀಕರಣ ಹಾಗೂ ಹೊಸ ನೋಂದಣಿ ಮಾಡಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಹೊಸ ವೈಶಿಷ್ಟ್ಯ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲ ಮಕ್ಕಳ ಬಯೋಮೆಟ್ರಿಕ್ ಮತ್ತು ನಂಬರ್‌ನ್ನು ನವೀಕರಣಗೊಳಿಸಬೇಕು ಎಂದು ತಿಳಿಸಿದ್ದಾರೆ.ಆಧಾರ್ ನೋಂದಣಿ ಮಾಡಿಸಿದ ನಂತರ ಸ್ವೀಕೃತಿಯಲ್ಲಿ ನಮೂದಿಸಿರುವ ಶುಲ್ಕವನ್ನು ಮಾತ್ರ ಪಾವತಿಸಬೇಕು ಹಾಗೂ ಪೂರ್ಣ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು. ಜಿಲ್ಲೆಯ ನಾಗರಿಕರು ಆಧಾರ್ ಹೊಸ ನೋಂದಣಿ ಹಾಗೂ ನವೀಕರಣಗಳ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.