ಕನ್ನಡಪ್ರಭ ವಾರ್ತೆ ಮೈಸೂರು

ಒಬ್ಬ ವ್ಯಕ್ತಿ ತನ್ನ ಮೌಲ್ಯಗಳಿಂದ ದೇವರಾಗಬಹುದು ಎನ್ನುವುದನ್ನು ತೋರಿಸಿಕೊಟ್ಟು ಸಕಲ ಕಾಲಕ್ಕೂ ಮಾದರಿಯಾದವನು ಪ್ರಭು ಶ್ರೀರಾಮ. ಇಂದು ನಿಯಮಾಧಾರಿತವಾಗಿರುವ ಸಮಾಜದಿಂದ ಮೌಲ್ಯಾಧಾರಿತ ಸಮಾಜದೆಡೆಗೆ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದರು.

ಪ್ರಜ್ಞಾಪ್ರವಾಹ ಕರ್ನಾಟಕ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಏಕಾತ್ಮ ಮಾನವ ದರ್ಶನ: ಭಾರತದ ವಿಶ್ವದೃಷ್ಟಿ ವಿಚಾರ ಸಂಕಿರಣದಲ್ಲಿ ಫಿಲಾಸಫಿ ಟು ಪಾಲಿಸಿ ಕಾಂಟೆಂಪ್ರರಿ ಪೊಲಿಟಿಕಲ್‌, ಎಕನಾಮಿಕ್‌ ಅಂಡ್‌ ಸಿವಿಲೈಜೇಷನ್‌ ಚಾಲೆಂಜಸ್‌ ಕುರಿತು ಅವರು ಮಾತನಾಡಿದರು.

ಭಾರತೀಯ ದೃಷ್ಟಿಕೋನದ ಅನುಷ್ಠಾನಕ್ಕೆ ವ್ಯಕ್ತಿ, ಸಮಾಜ, ಶಿಕ್ಷಣ ಕ್ಷೇತ್ರ, ನೀತಿ ನಿರೂಪಕರು ಮತ್ತು ಅಧಿಕಾರಿ ವರ್ಗ, ಜನಪ್ರತಿನಿಧಿಗಳ ಹಂತಗಳಲ್ಲಿ ಸವಾಲುಗಳು ಎದುರಾಗಬಹುದು. ಇದೆಲ್ಲದಕ್ಕಿಂತಲೂ ಒಂದು ದೊಡ್ಡ ಸವಾಲಾಗಿ ಪಾಶ್ಚಾತ್ಯ ಯೋಚನೆ ಮತ್ತು ಜೀವನ ಶೈಲಿಯಿಂದ ಪ್ರಭಾವಕ್ಕೆ ಒಳಗಾಗಿರುವ ಜನಮಾನಸ ನಮ್ಮ ಮುಂದಿದೆ. ಸಮಾಜವನ್ನು ನಿರ್ವಸಾಹತೀಕರಣ ಮಾಡಬೇಕು, ಆದರೆ ಅದಕ್ಕಾಗಿ ಪ್ರಯತ್ನಿಸುವವರೇ ವಸಾಹತುಶಾಹಿ ಮಾನಸಿಕತೆಗೆ ಒಳಗಾಗಿರುವಾಗ ಈ ಪ್ರಯತ್ನ ಸಫಲಗೊಳ್ಳುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.

ಸಿದ್ಧಾಂತ ಹೀನ ಮತದಾರ, ಸಿದ್ಧಾಂತ ಹೀನ ರಾಜ್ಯ ವ್ಯವಸ್ಥೆಯನ್ನು ನಿರ್ಮಿಸುತ್ತಾನೆ. ಇದರಿಂದಾಗಿ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅನ್ಯ ರಾಜ್ಯಗಳಲ್ಲಿ ರಾಜ ಮತ್ತು ಋಷಿಯ ವ್ಯವಸ್ಥೆ ಇದೆ. ಭಾರತದಲ್ಲಿ ಮಾತ್ರ ಅವುಗಳ ಸಮನ್ವಯಗೊಂಡ ರಾಜರ್ಷಿ ಎಂಬ ಕಲ್ಪನೆಯೂ ಇದೆ. ಎಲ್ಲಾ ರಾಜಕೀಯ ವ್ಯವಸ್ಥೆಯಲ್ಲಿ ಉತ್ತಮ ಜನಪ್ರತಿನಿಧಿಗಳಿದ್ದಾರೆ. ಆದರೆ ಪೀಳಿಗೆಗೊಬ್ಬ ಉತ್ತಮ ಜನಪ್ರತಿನಿಧಿಯ ನಿರ್ಮಾಣವಾಗುತ್ತಿದೆ. ಅಂತಹವರ ಸಂಖ್ಯೆ ಹೆಚ್ಚಾಗಬೇಕು. ರಾಜ್ಯದ ನಿಯಂತ್ರಣ ಕಡಿಮೆಯಾಗಿ ಸಮಾಜ ಕೇಂದ್ರಿತ ನಿರ್ವಹಣೆ ಹೆಚ್ಚಾಗಬೇಕು ಎಂದು ಅವರು ಕೋರಿದರು.


ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಸದಸ್ಯ ಪ್ರೊ.ಕೆ.ವಿ. ರಾಜು, ವಿವಿಧ ಕ್ಷೇತ್ರದಲ್ಲಿ ಏಕಾತ್ಮ ಮಾನವ ದರ್ಶನವನ್ನು ಯಾವ ಹಂತದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಸ್ಪಷ್ಟತೆ ನಮಗೆ ಇರಬೇಕು. ಯಾವುದೇ ವಿಚಾರ ಸಂಕಿರಣದ ನಂತರ ಅದರಲ್ಲಿ ಚರ್ಚೆಯಾದ ವಿಷಯಗಳ ಆಧಾರಿತವಾಗಿ ಮುಂದಿನ ಕಾರ್ಯ ಏನು ಮಾಡಬೇಕು, ಹೇಗೆ ಮಾಡಬೇಕು, ಯಾರು ಮಾಡಬೇಕು, ಇದರಿಂದ ಏನು ಪ್ರಯೋಜನ, ಅದನ್ನು ಹೇಗೆ ಮಾಪನ ಮಾಡುವ ಬಗೆ ಮತ್ತು ಅದರಿಂದ ಯಾರಿಗೆ ಪ್ರಯೋಜನವಾಗುತ್ತದೆ ಎನ್ನುವುದು ತಿಳಿದಿರಬೇಕು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಅಧ್ಯಾಪನದ ವಸ್ತು ಹೇಗಿದೆ ಮತ್ತು ಹೇಗಿರಬೇಕು ಎನ್ನುವುದರ ವಿಮರ್ಶೆ ಮುಖ್ಯ. ನಾವು ಪ್ರಸ್ತುತ ಅಳವಡಿಸಿಕೊಡಿರುವ ಅಧ್ಯಯನ ಮತ್ತು ಅಧ್ಯಾಪನದ ಮಾದರಿ ಸರಿಯಿದೆಯೇ ಎಂದು ಅಳೆಯುವುದಕ್ಕೆಸರಿಯಾದ ಮಾನದಂಡಗಳನ್ನು ಗುರುತಿಸಬೇಕು. ಈಗಾಗಲೇ ಏಕಾತ್ಮ ಮಾನವ ದರ್ಶನದ ಹಾದಿಯಲ್ಲಿ ಮುನ್ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಷ್ಟ್ರೋತ್ಥಾನ ಪರಿಷತ್, ಅನೇಕ ಗುರುಕುಲಗಳು, ರಾಮಕೃಷ್ಣ ಮಿಷನ್ ಆದಿಯಾಗಿ ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಅಳವಡಿಸಿಕೊಳ್ಳಬೇಕಾದ ಮಾದರಿಗಳನ್ನು ನಮ್ಮ ಅನೇಕ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ನವದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶಾಂತಿ ಶ್ರೀಧುಲಿಪುಡಿಪಂಡಿತ್‌ ಮಾತನಾಡಿ, ಭಾರತೀಯ ಕಥನವನ್ನು ಸಮರ್ಥವಾಗಿ ಜಗತ್ತಿನ ಎದುರು ಇಡುವುದಕ್ಕೆ ಸಹಕಾರಿಯಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ಸಿದ್ಧಪಡಿಸಬೇಕು. ಧೃವೀಕರಣಗೊಂಡಿರುವ ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತೀಯ ನಾಗರಿಕತೆಯ ಮತ್ತು ಸಾಂಸ್ಕೃತಿಕ ಮೌಲ್ಯ ಪಸರಿಸುವ ಅವಶ್ಯಕತೆ ಹೆಚ್ಚಿದೆ ಎಂದರು.