ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆ ಮತ್ತು ಆಡಳಿತದ ವೇಗ ಕಂಡು ವಿರೋಧ ಪಕ್ಷದವರಿಗೆ ದಿಕ್ಕು ತೋಚದಂತಾಗಿದೆ. ಜನರು ಬಿಜೆಪಿ ನಟನಾ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದ ಹಾಗೂ ಜನರನ್ನು ದಾರಿ ತಪ್ಪಿಸುವ ಇಂತಹ ಪಾದಯಾತ್ರೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಭಿವೃದ್ಧಿ ಕಾರ್ಯಗಳ ವೇಗವನ್ನು ಸಹಿಸಿಕೊಳ್ಳಲಾಗದೆ ರಾಜ್ಯದಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಹತಾಶ ಯತ್ನದಿಂದಲೇ ಬಿಜೆಪಿ ನಾಯಕರು ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ತೀವ್ರ ವಾಗ್ದಾಳಿ ನಡೆಸಿದರು.

ಕಾವೇರಿ ನೀರಾವರಿ ಸ್ಥಾವರದ ಬಳಿ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆ, ನಗರಸಭಾ ಕಾರ್ಯಾಲಯದಿಂದ ಸುಮಾರು 55 ಲಕ್ಷ ರು. ವೆಚ್ಚದಲ್ಲಿ ನೀರು ಎತ್ತುವ ಕೇಂದ್ರಕ್ಕೆ ತಡೆಗೋಡೆ ನಿರ್ಮಾಣ ಮತ್ತು ಕಟ್ಟಡ ಉನ್ನತೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

​ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆ ಮತ್ತು ಆಡಳಿತದ ವೇಗ ಕಂಡು ವಿರೋಧ ಪಕ್ಷದವರಿಗೆ ದಿಕ್ಕು ತೋಚದಂತಾಗಿದೆ. ಜನರು ಬಿಜೆಪಿ ನಟನಾ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದ ಹಾಗೂ ಜನರನ್ನು ದಾರಿ ತಪ್ಪಿಸುವ ಇಂತಹ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಸರ್ಕಾರದ ಅಭಿವೃದ್ಧಿ ಕಾರ್ಯಗಳ ವೇಗ ತಡೆಯಲು ವಿಪಕ್ಷಗಳು ವಿಫಲವಾಗಿವೆ. ಬರೀ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುತ್ತಿವೆ. ಬಿಜೆಪಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದ ಶಾಸಕರು, ಮದ್ದೂರು ನಗರ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಗ್ರಾಪಂ ಮಾಜಿ ಸದಸ್ಯ ಪುಟ್ಟರಾಮು ಮುಖಂಡರಾದ ತೊರೆ ಬೊಮ್ಮನಹಳ್ಳಿ ಸಿದ್ದರಾಮೇಗೌಡ, ಪೂಜಾರಿ ಮಹೇಶ್, ಸಿದ್ದರಾಜು, ಸಿದ್ದರಾಮೇಗೌಡ ,ವೆಂಕಟೇಶ್, ಡ್ರೈವರ್ ಗೋವಿಂದ, ಗೊಪ್ಪೆ ನವೀನ್, ಅಭಿಷೇಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.