ಕನ್ನಡಪ್ರಭ ವಾರ್ತೆ ಬ್ಯಾಕೋಡು
ಭಾರತೀಯ ಜನತಾ ಪಾರ್ಟಿ ಕುದರೂರು ಮಹಾಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆ ಜನಸಾಮಾನ್ಯರ ಹಿತದೃಷ್ಟಿಯಿಂದ ಕೂಡಿದ್ದಲ್ಲ, ಬದಲಾಗಿ ಮುಂಬರುವ ಪಂಚಾಯತ್ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿರುವ ರಾಜಕೀಯ ಗಿಮಿಕ್ ಎಂದು ಕೆಡಿಪಿ ಸದಸ್ಯ ಜಿ.ಟಿ. ಸತ್ಯನಾರಾಯಣ ಟೀಕಿಸಿದರು.ಇಲ್ಲಿಯ ತುಮರಿಯಲ್ಲಿ ಕರೂರು ಹೋಬಳಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಮರಿ ಮತ್ತು ಬ್ಯಾಕೋಡು ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಮಹಿಳಾ ವೈದ್ಯರು ರಾಜೀನಾಮೆ ನೀಡಿರುವುದಕ್ಕೆ ಬಿಜೆಪಿಯ ಸ್ಥಳೀಯ ಮುಖಂಡರ ಅನಪೇಕ್ಷಿತ ಒತ್ತಡವೇ ಕಾರಣ. ಆಸ್ಪತ್ರೆಯ ಸಣ್ಣಪುಟ್ಟ ವೈಫಲ್ಯಗಳನ್ನೇ ನೆಪವಾಗಿಸಿಕೊಂಡು ವೈದ್ಯರ ಮೇಲೆ ಒತ್ತಡ ಹೇರಿದ್ದರಿಂದ ಅವರು ಬೇಸತ್ತು ನಿರ್ಗಮಿಸಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗಾಗಲೇ ಸರ್ಕಾರ ಮರು ನೇಮಕಾತಿಗೆ ಆದೇಶಿಸಿದ್ದು, ಶೀಘ್ರದಲ್ಲೇ ಹೊಸ ವೈದ್ಯರು ನಿಯೋಜನೆಗೊಳ್ಳಲಿದ್ದಾರೆ. ಅಲ್ಲದೆ, ಎರಡೂ ಕೇಂದ್ರಗಳಿಗೆ ತಲಾ ಇಬ್ಬರು ನರ್ಸ್‌ಗಳನ್ನು ನೇಮಿಸಲಾಗಿದ್ದು, ಕಳೆದ ಎರಡು ದಿನಗಳಿಂದ ಅವರು ಸೇವೆ ಆರಂಭಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಂಸದರ ಮೌನಕ್ಕೆ ಆಕ್ರೋಶ:ಸ್ಥಳೀಯ ಬಿಜೆಪಿ ಮುಖಂಡರಿಗೆ ನೈತಿಕ ಸ್ಥೈರ್ಯವಿದ್ದರೆ ತಮ್ಮ ಸಂಸದರ ವೈಫಲ್ಯದ ಬಗ್ಗೆ ಮಾತನಾಡಲಿ. ರಸ್ತೆ ಮತ್ತು ರೈಲು ವಿಚಾರಗಳನ್ನು ಬಿಟ್ಟರೆ ಸಂಸದರು ಬೇರೆಲ್ಲೂ ಧ್ವನಿ ಎತ್ತುತ್ತಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ರೈತರ ಜಮೀನು ಮಂಜೂರಾತಿಗಾಗಿ ಸಾಗುವಳಿ ಮಿತಿಯನ್ನು 75 ವರ್ಷದಿಂದ 25 ವರ್ಷಕ್ಕೆ ಸಡಿಲಗೊಳಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಿ. ರೈತರ ಪರ ಕಾಳಜಿ ಇದ್ದರೆ ಸಂಸದರ ವಿರುದ್ಧ ಧ್ವನಿ ಎತ್ತಲಿ ಎಂದು ಗುಡುಗಿದರು.
ಅಂಬಾರಗುಡ್ಡ ಮತ್ತು ಸಂತ್ರಸ್ತರ ಸಮಸ್ಯೆ:
ಅಂಬಾರಗುಡ್ಡ ವನ್ಯಜೀವಿ ಸೂಕ್ಷ್ಮ ವಲಯ ವ್ಯಾಪ್ತಿಗೆ ಸುಮಾರು 200 ಮನೆಗಳಿರುವ 3500 ಎಕರೆ ರೈತರ ಜಮೀನು ಸೇರ್ಪಡೆಯಾದಾಗ, ಸ್ಥಳಕ್ಕೆ ಬಂದಿದ್ದ ಬಿ.ವೈ. ರಾಘವೇಂದ್ರ ಅವರು ಡಿನೋಟಿಫಿಕೇಶನ್ ಭರವಸೆ ನೀಡಿದ್ದರು. ಆದರೆ ಎರಡು ವರ್ಷ ಕಳೆದರೂ ಈ ಬಗ್ಗೆ ಚಕಾರವೆತ್ತಿಲ್ಲ. ಇನ್ನು ಶಾಸಕ ಹರತಾಳು ಹಾಲಪ್ಪನವರು ತಾವು ಮುಳುಗಡೆ ಸಂತ್ರಸ್ತರ ಮಗ ಎಂದು ಹೇಳಿಕೊಳ್ಳುತ್ತಾರೆಯೇ ಹೊರತು ವಿಧಾನಸಭೆಯಲ್ಲಿ ರೈತರ ಪರವಾಗಿ ಗಟ್ಟಿಯಾಗಿ ಮಾತನಾಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದರು.
ಸುಳ್ಳು ಆರೋಪಗಳಿಗೆ ಖಂಡನೆ:ವನ್ಯಜೀವಿ ವಲಯದ ಸಿಬ್ಬಂದಿಗಳು ಕಳೆದ ಎರಡು ದಿನಗಳ ಹಿಂದೆ ಬೇಲಿ ಕಿತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಶಾಸಕರ ಸಹಾಯಕರ ಮೇಲೆ ಕೇಳಿಬಂದಿರುವ ಪಿತೂರಿಯ ಆರೋಪಗಳನ್ನು ಸತ್ಯನಾರಾಯಣ ಅವರು ತಳ್ಳಿಹಾಕಿದರು. ಪಕ್ಷಭೇದವಿಲ್ಲದೆ ಕೆಲಸ ಮಾಡುವ ಪ್ರಾಮಾಣಿಕ ವ್ಯಕ್ತಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವುದು ಸರಿಯಲ್ಲ. ಇಂತಹ ರಾಜಕೀಯ ಪ್ರೇರಿತ ಕೃತ್ಯಗಳನ್ನು ನಾವು ಖಂಡಿಸುತ್ತೇವೆ ಎಂದರು.
ಕಾಂಗ್ರೆಸ್‌ನಿಂದ ಸ್ವಾಭಿಮಾನದ ಜನತಾ ಹೋರಾಟ:ಬಿಜೆಪಿಯ ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ ಕುಗ್ಗುವುದಿಲ್ಲ. ಶೀಘ್ರದಲ್ಲೇ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ, ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಸ್ವಾಭಿಮಾನದ ಜನತಾ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತುಮರಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಓಂಕಾರ್ ಜೈನ್.ಪಶು ವೈದ್ಯಕೀಯ ನಾಮ ನಿರ್ದೇಶಕ ಸದಸ್ಯ ಗಣೇಶ್ ಜಾಕಿ. ಯುವ ಮುಖಂಡ ಶಶಿ ಜೈನ್ ಮರಾಠಿ. ಸಂತೋಷ್ ಕುಮಾರ್ ಶೆಟ್ಟಿ. ಅಣ್ಣಪ್ಪ ತುಮರಿ. ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷ ಹರೀಶ್ ಗಂಟೆ. ಕೃಷ್ಣ ಭಂಡಾರಿ ತುಮರಿ. ವಿಜಯ. ಸುರೇಶ್. ಜಯಂತ ಬೊಬ್ಬಿಗೆ ಇದ್ದರು.ಹೋರಾಟವನ್ನು ಹೈಜಾಕ್ ಮಾಡುತ್ತಿದೆ ಬಿಜೆಪಿ
ವನ್ಯಜೀವಿ ವಲಯದ ಸಿಬ್ಬಂದಿಗಳು ಸಮೀಪದ ಯೋಗರಾಜ್ ಜೈನ್ ಅವರ ಬೇಲಿ ಕಿತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಹೋರಾಟ ಆರಂಭಿಸಿದ್ದು ಮಲೆನಾಡು ರೈತ ಹೋರಾಟ ವೇದಿಕೆ. ಆದರೆ ಈಗ ಈ ಹೋರಾಟ ಕಾವೇರುತ್ತಿದ್ದಂತೆ ಬಿಜೆಪಿ ಅದನ್ನು ಹೈಜಾಕ್ ಮಾಡಿ ತನ್ನ ಬ್ಯಾನರ್ ಅಳವಡಿಸಿಕೊಂಡಿದೆ. ಇದು ಕೇವಲ ಚುನಾವಣಾ ಗಿಮಿಕ್ ಎಂದು ಮಾಜಿ ಕೆಡಿಪಿ ಸದಸ್ಯ ದೇವರಾಜ ಕಪ್ಪದೂರು ಆರೋಪಿಸಿದ್ದಾರೆ.