ಜಿಲ್ಲಾಮಟ್ಟದ ಕಾರ್ಯಾಗಾರ ಹಾಗೂ ಗ್ಯಾರಂಟಿ ಉತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾವರಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸಿದೆ. ಚುನಾವಣೆಗೂ ಮುನ್ನ ಗ್ಯಾರಂಟಿ ಘೋಷಿಸಿ ೧೩೬ ಸ್ಥಾನ ಗೆದ್ದಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಕೆಳಗಿನೂರ ಒಕ್ಕಲಿಗರ ಸಭಾಭವನದಲ್ಲಿ ನಡೆದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜಿಲ್ಲಾಮಟ್ಟದ ಕಾರ್ಯಾಗಾರ ಹಾಗೂ ಗ್ಯಾರಂಟಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ಗ್ಯಾರಂಟಿ ಯೋಜನೆಗಳ ಮೇಲೆ ನಂಬಿಕೆ ಇಡಬೇಡಿ ಎಂದು ಬಿಜೆಪಿ ಹೇಳಿತ್ತು. ಆದರೆ ಜನ ಕಾಂಗ್ರೆಸ್ ಆರಿಸಿ ತಂದರು. ಗ್ಯಾರಂಟಿ ಮೂಲಕ ₹೫೦ ಸಾವಿರ ಕೋಟಿ ನೀಡಿದ್ದೇವೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಏನು ನೀಡಿದೆ ಎಂದು ನೀವು ಕೇಳಬೇಕು. ಬಿಜೆಪಿಯವರು ಮಾತ್ರ ಗ್ಯಾರಂಟಿಯನ್ನು ನಿಲ್ಲಿಸುತ್ತಾರೆ ಎಂದು ಹೇಳುತ್ತಾ ತಿರುಗುತ್ತಿದ್ದಾರೆ ಎಂದರು.
ಎಲ್ಲರೂ ಸಂತೋಷವಾಗಿದ್ದರೆ ಅದನ್ನು ಅಭಿವೃದ್ಧಿ ಎನ್ನಬಹುದು. ಈ ಯೋಜನೆಯಿಂದ ಹಲವು ಪ್ರಯೋಜನಗಳಿವೆ. ಜನರು ಸ್ವಾಭಿಮಾನದಿಂದ ಬದುಕಲು ಗ್ಯಾರಂಟಿ ನೀಡಲಾಯಿತು. ಗ್ಯಾರಂಟಿ ನೀಡಿದ ಬಳಿಕ ಅಭಿವೃದ್ಧಿಯೂ ಆಗುತ್ತಿದೆ. ಹಿಂದಿನ ಸರ್ಕಾರ ಗುತ್ತಿಗೆದಾರರಿಗೆ ನೀಡಬೇಕಿದ್ದ ಹಣವನ್ನು ಬಾಕಿ ಉಳಿಸಿಕೊಂಡಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಅದನ್ನು ತೀರಿಸಿದ್ದೇವೆ. ಗ್ಯಾರಂಟಿ ಬೋಗಸ್ ಎಂದು ಬಿಜೆಪಿ ಪ್ರಚಾರ ಮಾಡಿತು. ಒಳ್ಳೆಯದನ್ನು ಮಾಡಿದಾಗ ಸ್ವಾಗತಿಸಬೇಕು. ಬಡವರು ಅಭಿವೃದ್ಧಿ ಹೊಂದಲು ಬಿಡಬಾರದು ಎಂಬುದು ಅವರ ಉದ್ದೇಶ. ಅದು ಬಿಜೆಪಿಯವರ ಮನಸ್ಥಿತಿ. ನಮ್ಮ ಸರ್ಕಾರ ಇರುವವರೆಗೂ ಈ ಯೋಜನೆ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್. ಎಂ. ರೇವಣ್ಣ ಮಾತನಾಡಿ, ಪಂಚ ಗ್ಯಾರಂಟಿ ಜನರಿಗೆ ತಲುಪಿದೆಯೇ ಎಂದು ನೋಡಲು ನನಗೆ ಹೇಳಿದ್ದರು. ಅಂತೆಯೇ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜನರಿಗಾಗಿ ಕೆಲಸವನ್ನು ಮಾಡಿದ ಯಾವುದಾದರೂ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ನಾವು ಜನರ ಜೀವನಕ್ಕಾಗಿ ಕೆಲಸ ಮಾಡುತ್ತೇವೆ. ಜನರ ಭಾವನೆ ಜೊತೆ ಕೆಲಸ ಮಾಡುವುದಿಲ್ಲ ಎಂದರು.
ಪಂಚ ಗ್ಯಾರಂಟಿಯಿಂದಾಗಿ ತಲಾ ಆದಾಯ ಹೆಚ್ಚಾಗಿದೆ. ರಾಜ್ಯ ಪ್ರಗತಿಯತ್ತ ಸಾಗುತ್ತಿದೆ. ಯಾರಾದರೂ ಈ ಯೋಜನೆಯನ್ನು ಬಿಟ್ಟಿಭಾಗ್ಯ ಎಂದರೆ, ನೀವು ಇದಕ್ಕೆ ಪ್ರತಿಯಾಗಿ ನಮ್ಮ ಹಕ್ಕು ಅಂತಾ ಹೇಳಿ ಎಂದರು.ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟಿಲ್ ಮತ್ತು ಡಾ. ಪುಷ್ಪಾ ಅಮರನಾಥ್ ಮಾತನಾಡಿದರು.
ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ದಿಲೀಷ್ ಶಸಿ ಸ್ವಾಗತಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ ಪ್ರಾಸ್ತಾವಿಕ ನುಡಿಯನ್ನಾಡಿದರು. ಗ್ಯಾರಂಟಿ ಜಾಗೃತಿ ಅನುಷ್ಠಾನದ ಸದಸ್ಯ ಮೋಹನ ಕೆ. ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾಮಟ್ಟ ಹಾಗೂ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆ ಅಧ್ಯಕ್ಷರು, ಅಧಿಕಾರಿಗಳು ಹಾಜರಿದ್ದರು.