ಸಾರಾಂಶ
ಹುಬ್ಬಳ್ಳಿ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಸಂವಿಧಾನ ರಕ್ಷಣೆಗೆ ಒತ್ತಾಯಿಸಿ, ಕೇಂದ್ರ ಸರ್ಕಾರದ ವೈಫಲ್ಯ ವಿರೋಧಿಸಿ ಕಾಂಗ್ರೆಸ್ ಪಕ್ಷ ಹುಬ್ಬಳ್ಳಿಯಲ್ಲಿ ಮೇ 1ರಂದು ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ.
ಬಿಜೆಪಿ ಶಕ್ತಿ ಕೇಂದ್ರವೆನಿಸಿರುವ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶಿಸುವುದರ ಜತೆಗೆ ಕೇಂದ್ರದ ವಿರುದ್ಧ ಗುಡುಗಲು ಸಕಲ ಸಿದ್ಧತೆ ಮಾಡಿಕೊಂಡಿದೆ.ಧಾರವಾಡ, ಹುಬ್ಬಳ್ಳಿ- ಧಾರವಾಡ ಮಹಾನಗರ, ಹಾವೇರಿ, ಗದಗ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸರಿಸುಮಾರು 25-30 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರೆಲ್ಲರೂ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಗುಡುಗಲಿದ್ದಾರೆ. ಕಾರ್ಯಕ್ರಮದ ಸಿದ್ಧತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ, ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ ಸೇರಿದಂತೆ ಹಲವರು ಪರಿಶೀಲಿಸಿದರು.
ಇಲ್ಲಿನ ಗಿರಣಿಚಾಳದಲ್ಲಿನ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರತಿಭಟನಾ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವರಾದ ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್, ಸಂತೋಷ ಲಾಡ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.ಕಾಂಗ್ರೆಸ್ ಧ್ವಜಗಳು: ಪ್ರತಿಭಟನಾ ಸಮಾವೇಶದ ಹಿನ್ನೆಲೆಯಲ್ಲಿ ನಗರದಲ್ಲಿ ಕಾಂಗ್ರೆಸ್ ಮುಖಂಡರನ್ನು ಸ್ವಾಗತಿಸುವ ಧ್ವಜಗಳು, ಬ್ಯಾನರ್ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ಗಿರಣಿ ಚಾಳ ಮೈದಾನದಲ್ಲಿ ಇದಕ್ಕಾಗಿ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಬುಧವಾರ ಪ್ರತಿಭಟನಾ ಸಮಾವೇಶದ ತಯಾರಿಯನ್ನು ಪರಿಶೀಲಿಸಿದ ಸಲೀಂಅಹ್ಮದ್ ಮುಖಂಡರೊಂದಿಗೆ ಸಭೆಯನ್ನು ನಡೆಸಿದರು. ಜತೆಗೆ ಕೆಲವೊಂದಿಷ್ಟು ಸಲಹೆ ಸೂಚನೆ ನೀಡಿದರು.
ಈ ವೇಳೆ ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದ ಸಲೀಂ ಅಹ್ಮದ, ಈಗಾಗಲೇ ಬೆಂಗಳೂರು, ಬೆಳಗಾವಿಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ, ಬೆಲೆ ಏರಿಕೆಗೆ ಖಂಡಿಸಿ, ಸಂವಿಧಾನ ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನಾ ಸಮಾವೇಶ ಮಾಡಿದ್ದೇವೆ. ಇದೀಗ ಹುಬ್ಬಳ್ಳಿಯಲ್ಲಿ ಮೇ 1ರಂದು ಆಯೋಜಿಸಿದ್ದೇವೆ. ನಿರೀಕ್ಷೆಗೂ ಮೀರಿ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.ಬಿಜೆಪಿಯವರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಆ ರೀತಿ ಜನಾಕ್ರೋಶ ಯಾತ್ರೆ ಮಾಡುವ ನೈತಿಕತೆಯೇ ಬಿಜೆಪಿಗರಿಗೆ ಇಲ್ಲ. ಅವರು ಕ್ಷಮಾಪಣಾ ಯಾತ್ರೆ ಮಾಡಬೇಕು. ಏಕೆಂದರೆ ಕಳೆದ 12 ವರ್ಷದಿಂದ ಜನರಿಗೆ ಮೋಸ ಮಾಡುವುದು ಸುಳ್ಳು ಹೇಳುವುದು ಮಾಡಿದ್ದಾರೆ. ಇದೀಗ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದರು.
ಸುಳ್ಳು ಹೇಳುವುದರಲ್ಲಿ ಆಸ್ಕರ್ ಪ್ರಶಸ್ತಿ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಗಬೇಕು ಅಷ್ಟೊಂದು ಸುಳ್ಳು ಹೇಳುತ್ತಾರೆ ಅವರು ಎಂದು ಕಿಡಿಕಾರಿದ ಅವರು, ರಾಜ್ಯ ಸರ್ಕಾರ ಹಾಲು, ಮೊಸರು ಬೆಲೆ ಏರಿಕೆ ಮಾಡಿದ್ದನ್ನು ಆಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ರೈತರಿಗೆ ನಾವು ಹಾಲಿನ ದರ ಪ್ರೋತ್ಸಾಹ ದನ ಹೆಚ್ಚಿಗೆ ಕೊಡುತ್ತಿದ್ದೇವೆ. ಆ ರೀತಿ ರೈತರಿಗೆ ಕೊಡುವುದು ತಪ್ಪು ಎಂದು ಬಿಜೆಪಿ ಹೇಳಲಿ ನೋಡೋಣ. ಅವರಿಗೆ ಆ ದಮ್ ಇದ್ದರೆ ಹೇಳಲಿ ಎಂದು ಸವಾಲೆಸೆದರು.ಇದೇ ರೀತಿ ಯಾತ್ರೆಯನ್ನು ನಾವು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಮಾಡುತ್ತೇವೆ ಎಂದ ಅವರು, ಜಿಪಂ, ತಾಪಂ ಚುನಾವಣೆ ತಯಾರಿಯೂ ಭರದಿಂದ ಸಾಗಿದ್ದು, ಅಲ್ಲೂ ನಮ್ಮ ಪಕ್ಷವೇ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವುದು. 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಿಶೀಲನೆ ವೇಳೆ ಪಕ್ಷದ ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ, ಅಲ್ತಾಫ ಹಳ್ಳೂರ, ಸದಾನಂದ ಡಂಗನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.